ಕರ್ನಾಟಕ ಟಿವಿ : 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು 1 ವರ್ಷ 2 ತಿಂಗಳು ಬಾಕಿ ಇದೆ. ಆದ್ರೆ ಈಗಾಗಲೇ ಚುನಾವಣಾ ಲೆಕ್ಕಾಚಾರ ದೃಷ್ಟಿಯಿಂದ ಪಕ್ಷಾಂತರ ಶುರುವಾಗಿದೆ. ಸಚಿವ ಡಾ ಕೆ ಸುಧಾಕರ್, ಎಂಟಿಬಿ, ಮುನಿರತ್ನ ಮೆಗಾ ಆಪರೇಷನ್ ಕೈ ಹಾಕಿದ್ದಾರೆ..
ಚಿಕ್ಕಬಳ್ಳಾಪುರದ 5 ಕ್ಷೇತ್ರ ಕೋಲಾರದ 6 ಕ್ಷೇತ್ರ ಬೆಂಗಳೂರು ಗ್ರಾಮಾಂತರದ 4 ಕ್ಷೇತ್ರಗಳು ಸೇರಿದಂತೆ ಒಟ್ಟು 15 ಕ್ಷೇತ್ರದಲ್ಲಿ ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ನೆಲಮಂಗಲ, ದೇವನಹಳ್ಳಿ, ಚಿಂತಾಮಣಿ, ಕೋಲಾರ ಸೇರಿ 4ರಲ್ಲಿ ಜೆಡಿಎಸ್ ಶಾಸಕರಿದ್ರೆ ದೊಡ್ಡಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಶ್ರೀನಿವಾಸಪುರ, ಕೆಜಿಎಫ್, ಮಾಲೂರು, ಬಂಗಾರಪೇಟೆ ಸೇರಿ 8 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದು ಹೊಸಕೋಟೆ & ಮುಳಬಾಗಿಲು ಕ್ಷೇತ್ರದಲ್ಲಿ ಮಾತ್ರ ಪಕ್ಷೇತರ ಶಾಸಕರು ಗೆಲುವು ಸಾಧಿಸಿದ್ದಾರೆ.
2018ರ ಚುನಾವಣೆಯಲ್ಲಿ ಬಿಜೆಪಿ ಶೂನ್ಯ ಸಾಧನೆ
2018ರ ಚುನಾವಣೆಯ ಫಲಿತಾಂಶ ಬಂದಾಗ 15 ಕ್ಷೇತ್ರದಲ್ಲಿ ಬಿಜೆಪಿ ಒಂದು ಕ್ಷೇತ್ರದಲ್ಲೂ ಗೆಲುವು ಸಾಧಿಸಿರಲಿಲ್ಲ.. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ, ಕೆಜಿಎಫ್ ಕ್ಷೇತ್ರದಲ್ಲಿ ಅಶ್ವಿನಿ ಸಂಪಗಿ ಮಾತ್ರ ಎರಡನೇ ಸ್ಥಾನ ಪಡೆದಿದ್ರು.. 15 ಸ್ಥಾನಗಳಲ್ಲಿ ಕಾಂಗ್ರೆಸ್ 10 ಸ್ಥಾನ ಬಾಚಿಕೊಂಡ್ರೆ, ಜೆಡಿಎಸ್ ನಾಲ್ಕರಲ್ಲಿ ಪಕ್ಷೇತರ ಒಂದು ಸ್ಥಾನ ಗಳಿಸಿತ್ತು. ಆದ್ರೆ, 2019ರ ಆಪರೇಷನ್ ಕಮಲದಲ್ಲಿ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ ಕೆ ಸುಧಾಕರ್ ಹಾಗೂ ಹೊಸಕೋಟೆಗೆ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ರು. ಬೈ ಎಲೆಕ್ಷನ್ ನಲ್ಲಿ ಸುಧಾಕರ್ ಗೆದ್ರೆ, ಎಂಟಿಬಿ ನಾಗರಾಜ್ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಸೋಲು ಕಂಡ್ರು.
9 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಠೇವಣಿ ಸಿಕ್ಕಿರಲಿಲ್ಲ ( 15 ಕ್ಷೇತ್ರ : ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು )
ಇನ್ನು 15 ಕ್ಷೇತ್ರಗಳಲ್ಲಿ ಬಾಗೇಪಲ್ಲಿ, ಚಿಂತಾಮಣಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ದೇವನಹಳ್ಳಿ, ಶ್ರೀನಿವಾಸಪುರ, ಕೋಲಾರ, ಮುಳಬಾಗಿಲು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಠೇವಣಿ ನಷ್ಟ ಮಾಡಿಕೊಂಡಿದ್ರು.. ನೆಲಮಂಗಲದಲ್ಲಿ ನಾಗರಾಜು, ದೊಡ್ಡಬಳ್ಳಾಪುರದಲ್ಲಿ ಜೆ ನರಸಿಂಹಸ್ವಾಮಿ, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ, ಗೌರಿಬಿದನೂರಿನಲ್ಲಿ ಜೈಪಾಲ್, ಕೆಜಿಎಫ್ ನಲ್ಲಿ ಅಶ್ವಿನಿ ಸಂಪಗಿ, ಬಂಗಾರಪೇಟೆಯಲ್ಲಿ ನಾರಾಯಣಸ್ವಾಮಿ, ಮಾಲೂರಿನಲ್ಲಿ ಕೃಷ್ಣಯ್ಯ ಶೆಟ್ಟಿ ಮಾತ್ರ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ರು..
ಈ 7 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಪೈಪೋಟಿ ಕೊಡಲು ಸಾಧ್ಯ
ಚುನಾವಣೆ ವೇಳೆಗೆ ಸಾಕಷ್ಟು ರಾಜಕೀಯ ಲೆಕ್ಕಾಚಾರ ಬದಲಾದರೂ ಸದ್ಯಕ್ಕೆ ಬಿಜೆಪಿ ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ, ಚಿಕ್ಕಬಳ್ಳಾಪುರ, ಮಾಲೂರು, ಕೆಜಿಎಫ್, ಬಂಗಾರಪೇಟೆಯಲ್ಲಿ ಮಾತ್ರ ಪೈಪೋಟಿ ನೀಡಲು ಸಾಧ್ಯವಿದೆ. ಚಿಕ್ಕಬಳ್ಳಾಪುರ, ನೆಲಮಂಗಲ, ಕೆಜಿಎಫ್, ಮಾಲೂರು, ದೊಡ್ಡಬಳ್ಳಾಪುರ, ಬಂಗಾರಪೇಟೆ, ಹೊಸಕೋಟೆಯಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳದೆ 100% ಶ್ರಮ ಹಾಕಿದ್ರೆ ಬಿಜೆಪಿ ಗೆಲುವಿನ ನಿರೀಖ್ಷೆ ಇಟ್ಟಕೊಳ್ಳಬಹುದು.
6 ಕ್ಷೇತ್ರದಲ್ಲಿ ಬಿಜೆಪಿಗೆ ಆಪರೇಷನ್ ಅನಿವಾರ್ಯ
ಎಲೆಕ್ಷನ್ ಗೆ ಇನ್ನೊಂದು ವರ್ಷ ಬಾಕಿ ಇದೆ. ಈಗ ಇರುವ ಕಾರ್ಯಕರ್ತರನ್ನ ಕಟ್ಟಿಕೊಂಡು ಟಾರ್ಗೆಟ್ ರೀಚ್ ಆಗೋದು ಅಸಾಧ್ಯವಾದ ಮಾತು ಹೀಗಾಗಿ ಸಚಿವ ಸುಧಾಕರ್ ನೇತೃತ್ವದಲ್ಲಿ ಮುನಿರತ್ನ ಹಾಗೂ ಎಂಟಿಬಿ ನಾಗರಾಜ್ ಆಪರೇಷನ್ ಗೆ ಕೈ ಹಾಕಿದ್ದಾರೆ. ಮೊದಲ ಹೆಜ್ಜೆ ಅನ್ನುವಂತೆ ದೇವನಹಳ್ಳಿ ಜೆಡಿಎಸ್ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪರನ್ನ ಸುಧಾಕರ್ ಬಿಜೆಪಿ ಸೇರ್ಪಡೆ ಮಾಡಿಸಿದ್ದಾರೆ. ಇನ್ನು ಗೌರಿಬಿದನೂರು, ಶಿಡ್ಲಘಟ್ಟದಲ್ಲಿ ಬೇರೆ ಪಕ್ಷದ ನಾಯಕರಿಗೆ ಸುಧಾಕರ್ ಗಾಳ ಹಾಕ್ತಿದ್ದಾರೆ. ಬಾಗೇಪಲ್ಲಿ, ಚಿಂತಾಮಣಿಯಲ್ಲಿ ಸ್ಥಿತಿವಂತರನ್ನ ಈಗಾಗಲೇ ಅಖಾಡಕ್ಕೆ ಇಳಿಸಿದ್ದಾರೆ.. ಇತ್ತ ಕೋಲಾರದಲ್ಲಿ ಮುಳಬಾಗಿಲು, ಕೋಲಾರ ಕ್ಷೇತ್ರದ ದೃಷ್ಟಿಯಿಂದ ಕೊತ್ತೂರು ಮಂಜುನಾಥ್ ರನ್ನ ಪಕ್ಷಕ್ಕೆ ಕರೆತರಲು ಪ್ರಯತ್ನ ನಡೀತಿದೆ. ಆದ್ರೆ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಕಡೆ ವಾರೆಗಣ್ಣಿನಿಂದ ನೋಡ್ತಿದ್ರು. ಆದ್ರೆ ಡಿಕೆಶಿ ಕೆಜಿಎಫ್ ಬಾಬುಗೆ ಕೋಲಾರದಲ್ಲಿ ಟಿಕೆಟ್ ನೀಡಲು ಮುಂದಾಗಿರುವುದು ಕೊತ್ತೂರು ಮಂಜುನಾಥ್ ಮತ್ತೆ ಕಮಲ ಪಕ್ಷದ ಕಡೆ ಮುಖಮಾಡುವ ಸಾಧ್ಯತೆ ಇದೆ. ಕೊತ್ತೂರು ಮಂಜುನಾಥ್ ಬಿಜೆಪಿ ಸೇರಿದ್ರೆ ಕೋಲಾರ ಹಾಗೂ ಮುಳಬಾಗಿಲು ಕ್ಷೇತ್ರ ಕಮಲ ಪಕ್ಷದ ತೆಕ್ಕೆಗೆ ಬರುವ ಸಾಧ್ಯತೆ ಇದೆ. ಇನ್ನು ಶ್ರೀನಿವಾಸ ಪುರದಲ್ಲಿ ವೆಂಕಟಶಿವಾರೆಡ್ಡಿಯವರನ್ನ ಗೆಲ್ಲಿಸಲು ಮುನಿರತ್ನ, ಸುಧಾಕರ್ ಪಣತೊಟ್ಟಂತೆ ಕಾಣ್ತಿದೆ. ಅವರು ಜೆಡಿಎಸ್ ನಿಂದ ಸ್ಪರ್ಧೆ ಮಾಡ್ತಾರಾ ಅಥವಾ ಬಿಜೆಪಿ ಸೇರ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ಆಪರೇಷನ್ ಸಿಕೆಬಿಗೆ ಚಾಲನೆ ಕೊಡುವ ಮೂಲಕ ಡಾ ಸುಧಾಕರ್ ಕಾಂಗ್ರೆಸ್ ಸೇರಲ್ಲ, ಬಿಜೆಪಿಯಲ್ಲೇ ಉಳಿಯುತ್ತೇನೆ ಅನ್ನುವ ಸೂಚನೆ ನೀಡಿದ್ದಾರೆ.
ಶಿವಕುಮಾರ್ ಬೆಸಗರಹಳ್ಳಿ, ಪೊಲಿಟಿಕಲ್ ಬ್ಯೂರೋ, ಕರ್ನಾಟಕ ಟಿವಿ