ನಮ್ಮ ಗುರಿ ಮನುಷ್ಯರಿಂದ ಮಾನವರಾಗುವತ್ತ ಇರಬೇಕು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಲಬುರಗಿ : ಮನುಷ್ಯರಿಂದ ಮಾನವರಾಗುವತ್ತ ನಮ್ಮ ಗುರಿ ಇರಬೇಕು. ಮನುಷ್ಯರಿಂದ ಮಾನವರಾಗುವತ್ತ ನಮ್ಮ ಪಯಣಕ್ಕೆ ವೀರಶೈವ ಧರ್ಮ, ಸಂಸ್ಕøತಿ, ಸಂಸ್ಕಾರ, ಗುರುಗಳ ಆಶೀರ್ವಾದ, ಮಾರ್ಗದರ್ಶನ ಸದಾಕಾಲ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಹಾಗೂ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆಯನ್ನು ಘೋಷಿಸಿದ ಕಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಆದಿ ರೇಣುಕಾಚಾರ್ಯರ ಆಶೀರ್ವಾದ ಸದಾ ಕಾಲ ನಮ್ಮ ಮೇಲೆ ಇದೆ. ಅದೇ ನಮ್ಮ ಹೆಮ್ಮೆ. ನಿಮ್ಮೆಲ್ಲರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ. ನಾವು ಮಾಡುವ ಕೆಲಸ ದೊಡ್ಡದಲ್ಲ. ಅದನ್ನುಆಚರಣೆಗೆ ತರುವಲ್ಲಿ ತಮ್ಮೆಲ್ಲರ ಕರ್ತವ್ಯಪ್ರಜ್ಞೆ ದೊಡ್ಡದು ಎಂದರು. ಸಮಾಜದ ಏಳಿಗೆಗೆ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರೂ ನಮಗೆ ಇದನ್ನೇ ಹೇಳಿಕೊಟ್ಟಿದ್ದಾರೆ ಎಂದರು.

ಹುಟ್ಟು ಮತ್ತು ಸಾವಿನಲ್ಲಿ ನಾವು ಸಮಾನರು
ವೀರಶೈವ ಧರ್ಮಕ್ಕೆ ಮಾರ್ಗದರ್ಶನ ಅಗತ್ಯವಿದ್ದಾಗ ಹಾಗೂ ಈ ಸಮಾಜವನ್ನು ಮುನ್ನಡೆಸುವ ಸಂದರ್ಭಗಳಲ್ಲಿ, ಪರಮಪೂಜ್ಯ 1008 ಡಾ: ಪ್ರಸನ್ನ ವೀರಮಹಾಸ್ವಾವಿಗಳ ಪ್ರಾಂಜಲ ಮನಸ್ಸಿನಿಂದ ನೀಡಿರುವ ಕೃಪಾಶೀರ್ವಾದ ನಿರಂತರವಾಗಿ ನಮಗೆ ರಕ್ಷಾಕವಚವಾಗಿದೆ. ಆದಿಗುರು ರೇಣುಕಾರ್ಚಾಯರು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಮಾತನ್ನು ನಮಗೆ ನೀಡಿದ್ದಾರೆ. ಈ ಬಗ್ಗೆ ನಾವು ಯೋಚನೆ ಮಾಡಬೇಕು. ಮಾನವ ಧರ್ಮಕ್ಕೆ ಜಯವಾಗಲಿ ಎಂದಿದ್ದಾರೆ. ನಾವ್ಯಾರೂ ಕೂಡ ಅರ್ಜಿ ಹಾಕಿ ಹುಟ್ಟಲಿಲ್ಲ. ಹುಟ್ಟಿನಿಂದ ನಾವು ಸಮಾನರು. ಸಾವಿನಲ್ಲೂ ಸಮಾನರು. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಬದುಕು ಪ್ರಸ್ತುತ. ಎಲ್ಲರೂ ಮನುಷ್ಯರಾಗಿ ಹುಟ್ಟಿರುತ್ತೇವೆ. ಕೆಲವರು ತಮ್ಮ ಆತ್ಮಶುದ್ದಿಯಿಂದ, ನಡೆನುಡಿ ಶುದ್ದಿಯಿಂದ ಮನುಷ್ಯರಾಗಿ ಮಾನವರಾಗುತ್ತಾರೆ. ಮನುಷ್ಯ ಮತ್ತು ಮಾನವರ ನಡುವಿನ ವ್ಯತ್ಯಾಸವಿದೆ. ಕಾಮ, ಕ್ರೋಧ, ಮದ ಮಾತ್ಸರ್ಯಗಳ ಸಂಕೋಲೆಯಲ್ಲಿ ಸಿಕ್ಕವನು ಮನುಷ್ಯ. ಇವುಗಳಿಂದ ಬಿಡುಗಡೆಗೊಂಡು ಸತ್ಯ, ಧರ್ಮ, ನ್ಯಾಯ, ನೀತಿ, ಪ್ರೀತಿ, ವಿಶ್ವಾಸಗಳ ಸಂಕೋಲೆಯಲ್ಲಿ ಸಿಕ್ಕವನು ಮಾನವ. ಮನುಷ್ಯನಿಂದ ಮಾನವನೆಡೆಗಿನ ಪಯಣಕ್ಕೆ ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಅಗತ್ಯ. ಗುರುವಿನಲ್ಲಿ ಭಕ್ತಿ ಇಟ್ಟವರಿಗೆ ಸಕಲವೂ ಪ್ರಾಪ್ತಿಯಾಗುತ್ತದೆ. ಭಕ್ತಿ ಎಂದರೆ ಉತ್ಕøಷ್ಟವಾದ ಪ್ರೀತಿ. ಉತ್ಕøಷ್ಟವಾದ ಪ್ರೀತಿ ಎಂದರೆ ಕರಾರುರಹಿತ ಪ್ರೀತಿ ಎಂದರು.

ಗುರುವಿನಲ್ಲಿ ಸಮರ್ಪಣಾ ಭಾವ ಇರಬೇಕು
ಭಕ್ತ ಭಗವಂತನಲ್ಲಿ ಯಾವುದನ್ನೂ ಬೇಡುವ ಅವಶ್ಯಕತೆ ಇಲ್ಲ. ಅವನ ಆಶೀರ್ವಾದ ಎಲ್ಲರ ಮೇಲೂ ಇರುತ್ತದೆ. ಯಾವ ಇಚ್ಛೆಯನ್ನೂ ವ್ಯಕ್ತಪಡಿಸದಿದ್ದರೂ ದೇವರ ಆಶೀರ್ವಾದ ಕಡಿಮೆಯಾಗುವುದಿಲ್ಲ ಎನ್ನುವ ಒಂದು ಮಾತಿದೆ. ಗುರುವಿನಲ್ಲಿ ಸಮರ್ಪಣಾ ಭಾವ ಇದ್ದರೆ ದೇವರ ಆಶೀರ್ವಾದ ಸಿಕ್ಕೇ ಸಿಗುತ್ತದೆ. ಇರಬೇಕು. ಗುರುವಿನಲ್ಲಿ ಸಮರ್ಪಣಾ ಭಾವನೆಯಿಂದ ಸಂಪೂರ್ಣವಾಗಿ ಕರಗಿ ಲೀನವಾಗಬೇಕು. ಈ ಪ್ರಕ್ರಿಯೆಯಲ್ಲಿ ಬದುಕಿನ ಒಂದು ಹಂತದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿರುತ್ತೇವೆ. ನಾವು ಯಾರೂ ನಮ್ಮ ಕರ್ತವ್ಯ, ಕರ್ಮ, ಕಾಯಕವನ್ನು ಬಿಟ್ಟು ಮಾಡಬೇಕು ಎಂದು ಹೇಳಿಲ್ಲ. ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎಂದಂತೆಯೇ ಕಾಯಕಧರ್ಮವನ್ನು ತೋರಿಸಿದ್ದಾರೆ. ಇವೆಲ್ಲವೂ ನಮ್ಮ ಬದುಕಿಗೆ ಒಂದು ದಿಕ್ಸೂಚಿಯಾಗಿದೆ ಎಂದರು.

ಎಲ್ಲರನ್ನೂ ಒಳಗೊಂಡ ವೀರಶೈವ ಸಮಾಜ
ಇಂಥ ಸಂಸ್ಕøತಿ, ಸಂಸ್ಕಾರದ ಎಲ್ಲರಿಗೂ ಮಾದರಿಯಾಗಿರುವ, ಎಲ್ಲರನ್ನೂ ಒಳಗೊಂಡ ಸಮಾಜ ಎಲ್ಲರನ್ನೂ ಒಪ್ಪಿ, ಅಪ್ಪುವ, ಹೃದಯವಂತ ಸಮಾಜ ವೀರಶೈವ ಸಮಾಜ. ನಮ್ಮ ಗುರುಗಳು ಸಹ ಹೃಯದವಂತರು. ನನ್ನ ಸಾರ್ವಜನಿಕ ಜೀವನದಲ್ಲಿ ಹಲವಾರು ಆಯಾಮಗಳಲ್ಲಿ ನನಗೆ ಅವರ ಮಾರ್ಗದರ್ಶನ ಸಿಕ್ಕಿದ್ದು, ನಾನು ಪುಣ್ಯವಂತ ಎಂದು ಭಾವಿಸಿದ್ದೇನೆ. ಸಿದ್ಧಾಂತ ಶಿಖಾಮಣಿಯಲ್ಲಿ ಯಾವ ವಿಚಾರಗಳನ್ನು ಯಾವ ಸ್ವರೂಪದಲ್ಲಿ ಹೇಳಿದ್ದಾರೆ. ಅವುಗಳನ್ನು ಕಾರ್ಯರೂಪಕ್ಕೆ ತರುವ ಲಿಂಗಪೂಜೆಯಿಂದ ಹಿಡಿದು ಆತ್ಮ ಪೂಜೆಯವರೆಗಿನ ವಿಧಿವಿಧಾನಗಳನ್ನು ಪರಿಪಾಲನೆ ಮಾಡುವ ಚೌಕಟ್ಟು. ಆ ಚೌಕಟ್ಟನ್ನು ಮೀರಿ ನಡೆಯಬಾರದು ಎನ್ನುವುದನ್ನು ನೆನಪುಮಾಡಿಕೊಡುವ ಸಿದ್ಧಾಂತ ಶಿಖಾಮಣಿಯ ಎಲ್ಲಾ ಆಚಾರವಿಚಾರಗಳನ್ನು ನಾವು ಪರಿಪಾಲನೆ ಮಾಡಿದರೆ ಇಡೀ ಸಮಾಜ ಹಾಗೂ ಮನುಕುಲಕ್ಕೆ ಒಂದು ದಾರಿದೀಪವಾಗುತ್ತದೆ. ಅದನ್ನೇ ನಮ್ಮ ಗುರುಗಳಾದ ರಂಭಾಪುರಿ ಶ್ರೀಗಳು ಮಾರ್ಗದರ್ಶನ ಮಾಡಿದ್ದಾರೆ ಎಂದರು.

About The Author