ಬೆಂಗಳೂರು : ಸಂದೀಪ್ ಜಿ.ಎಸ್. ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಇವರು ಪೊಲೀಸ್ ಇಲಾಖೆಗೆ ಪಿಎಸ್ಐ ಆಗಿ 2007ರಲ್ಲಿ ಸೇರ್ಪಡೆಗೊಂಡರು. ದಕ್ಷತೆ ಹಾಗೂ ವೃತ್ತಿ ನಿಷ್ಟೆಯಿದ್ದರೆ ಆಯಾ ಕ್ಷೇತ್ರಗಳಲ್ಲಿ ಹೇಗೆ ಛಾಪು ಮೂಡಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ. ಉಳ್ಳಾಲ ಠಾಣಾ ವ್ಯಾಪ್ತಿಯ ಕೆಸಿ ರಸ್ತೆಯಲ್ಲಿ ಅಕಿಫ್ ಎಂಬ 12 ವರ್ಷದ ಬಾಲಕನ ಹತ್ಯೆ ಪ್ರಕರಣ ಸಂಚಲನ ಸೃಷ್ಟಿಸಿತ್ತು. ಪರಿಸ್ಥಿತಿ ಕೈ ಮೀರಲಿದೆ ಎಂದೇ ಹೆಚ್ಚಿನವರು ಆತಂಕಿತರಾಗಿದ್ದರು. ಆದರೆ, ವಿಶೇಷ ಮುತುವರ್ಜಿ ವಹಿಸಿ ತನಿಖೆಗೆ ಇಳಿದ ಇವರು ಶೀಘ್ರವಾಗಿ ಆರೋಪಿತರನ್ನು ಬಂಧಿಸಿ ಯಾವುದೇ ಗಲಭೆಗೆ ಆಸ್ಪದ ಸಿಗದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು. ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಇಂಥ ಪ್ರಕರಣಗಳನ್ನು ನಿಭಾಯಿಸಿದ ರೀತಿ ಶ್ಲಾಘನೀಯ ಎಂದೇ ಹೇಳಬೇಕು.
ಇವರು ಅಕ್ರಮ ಚಟುವಟಿಕೆ, ಗೂಂಡಾಗಿರಿ, ವಿವಿಧ ಕಾನೂನು ಬಾಹಿರ ಕೃತ್ಯಗಳನ್ನು ನಡೆಸುವವರಿಗೆ ಸಿಂಹಸ್ವಪ್ನವಾಗಿ ಕಾಡಿದರು. ಹತ್ಯೆ ಪ್ರಕರಣಗಳನ್ನು ಅಚ್ಚರಿ ರೀತಿಯಲ್ಲಿ ಭೇದಿಸಿ ಆರೋಪಿಗಳ ಪಾಲಿಗೆ ಅರಗಿಸಿಕೊಳ್ಳದ ತುತ್ತು ಇವರು. ನಿಷ್ಠೆ, ಪ್ರಾಮಾಣಿಕತೆ ಮೆರೆದು ವೃತ್ತಿಗೆ ತಮ್ಮದೇ ಶೈಲಿಯಲ್ಲಿ ಗೌರವ ನೀಡುತ್ತಿದ್ದಾರೆ. ಸಾಮಾಜಿಕವಾಗಿ ಜನರ ಸಂಕಷ್ಟಕ್ಕೆ ಹೆಗಲು ಕೊಡುವ ಮೂಲಕ, ಮಾನವೀಯತೆಯೊಂದಿಗೆ ದುಡಿಯುವ ಕ್ಷೇತ್ರಕ್ಕೂ ನ್ಯಾಯ ಒದಗಿಸಲು ಸಾಧ್ಯ ಎಂದು ನಿರೂಪಿಸಿದ್ದಾರೆ
ಮುಖ್ಯವಾಗಿ ಉಳ್ಳಾಲ ಠಾಣಾ ವ್ಯಾಪ್ತಿ ಹಲವಾರು ಗಲಾಟೆ, ಕೋಮುಗಲಭೆ ಮುಂತಾದವುಗಳ ಕರಾಳ ಇತಿಹಾಸವನ್ನೆ ಮೈಗಂಟಿಸಿ ಕೂತಿದ್ದ ಪ್ರದೇಶ. ಅಲ್ಲಿಲ್ಲೊಂದು ಕಡೆ ರಕ್ತದ ವಾಸನೆ ಮೂಗಿಗೆ ಬಡಿಯುತ್ತಲೆ ಇರುವಂತ, ನಾಗರಿಕರು ಭಯದಲ್ಲೇ ಉಸಿರಾಡುವಂತ ಸ್ಥಳ. ಕೆಂಪು ನಾಡಿನಲ್ಲಿ ಸಂದೀಪ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಸುಮಾರು ಒಂದುವರೆ ವರ್ಷದಿಂದ ಯಾವುದೇ ಸಣ್ಣಪುಟ್ಟ ಗಲಾಟೆಗಳು, ಮಾತಿನ ಚಕಮಕಿ ಅಥವಾ ಕೋಮುಗಲಭೆ ಮುಂತಾದವುಗಳಿಗೆ ಆಸ್ಪದ ಕೊಡಲಿಲ್ಲ. ಎಲ್ಲಾ ಕೋಮಿನವರ ಜೊತೆಗೆ ಉತ್ತಮ ಬಾಂಧವ್ಯ, ವಿಶ್ವಾಸ ಹೊಂದುವ ಜೊತೆಗೆ ಎಲ್ಲರನ್ನ ಒಗ್ಗಟ್ಟಿನಿಂದ ಕರೆದೊಯ್ದ ಪ್ರಕ್ರಿಯೆ ಸಾಹಸಮಯ ಎಂದೇ ಹೇಳಬಹುದು.
ಇವರ ಚಾಣಾಕ್ಷತೆಗೆ ಮತ್ತೊಂದು ಉದಾಹರಣೆಯಾಗಿ ಕಂಡಿದ್ದು ಒಂಟಿ ಬಂಗಲೆಯ ಕಳ್ಳತನ ಪ್ರಕರಣ. ರಬ್ಬರ್ ಕಾಡಿನಲ್ಲಿರುವ ಒಂಟಿ ಬಂಗಲೆಯಲ್ಲಿ ಕೆಲವು ದುಷ್ಕರ್ಮಿಗಳು ಲಕ್ಷಗಟ್ಟಲೆ ಬೆಲೆಬಾಳುವ ದೀಪಗಳನ್ನು ಕಳ್ಳತನ ಮಾಡಿದ್ದರು. ಆದರೆ, ಇವರ ಆರನೇ ಇಂದ್ರಿಯವನ್ನು ಜಾಗೃತಗೊಳಿಸಿ ಕಳ್ಳರನ್ನು ಕೂಡಲೇ ಬಂಧಿಸಿ ಬೆಲೆಬಾಳುವ ದೀಪಗಳನ್ನು ವಶಕ್ಕೆ ಪಡೆದರು.
ಮಾಡೂರಿನಲ್ಲಿ ಕೋಣವನ್ನು ಗುಂಡಿಕ್ಕಿ ಹತ್ಯೆ ಮಾಡಿದ 7 ದುಷ್ಕರ್ಮಿಗಳನ್ನು 24 ಗಂಟೆಯೊಳಗೆ ಬಂದಿಸಿ ಕ್ರಮ ವಹಿಸಿದ್ದರು. ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಕುರಿತು 30ಕ್ಕು ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಹಲವಾರು ಮರಳು ಸಾಗಾಣಿಕೆ ವಾಹನಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಒಳಪೇಟೆ ಜೈರಾಜ್ ರವರ ಮನೆಗೆ ಕಳ್ಳರು ನುಗ್ಗಿ ಅವರ ಸಹೋದರಿಯ ಸುಮಾರು 120 ಗ್ರಾಂ ಬಂಗಾರದ ಆಭರಣಗಳನ್ನು ದೋಚಿದ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆಹಚ್ಚುವುದು ಕ್ಲಿಷ್ಟಕರ ಎಂಬಂತಾಗಿತ್ತು. ಸತತ ಕಾರ್ಯಾಚರಣೆ ನಡೆಸಿ 2 ತಿಂಗಳೊಳಗೆ ಸೆರೆಹಿಡಿದು ಅವರ ಸಂಪೂರ್ಣ ಬಂಗಾರವನ್ನು ಮರಳಿ ಕೊಡಿಸುವ ಕಾರ್ಯ ಮಾಡಿದ್ದಾರೆ.
ಉಳ್ಳಾಲ ಠಾಣೆಯ ಇವರ ಅಧಿಕಾರ ಅವಧಿಯಲ್ಲಿ ಸುಮಾರು 200ಕೆ.ಜಿ.ಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡಿದ್ದಾರೆ. ಗಾಂಜಾ ಮಾರಾಟ ಮಾಡುವವರು, ಸೇವನೆ ಮಾಡುವವರ ಮೇಲೆ ನಿರಂತರ ಕ್ರಮ ವಹಿಸುತ್ತಲೇ ಬಂದಿದ್ದಾರೆ. ಅಕ್ರಮ ಎಸಗುವ ಯೋಚನೆ ಮಾಡುವ ಮುನ್ನ ಸಾವಿರ ಬಾರಿ ಯೋಚನೆ ಮಾಡುವಂತಾಗಿದೆ ಹಲವರ ಸ್ಥಿತಿ.
ತಮ್ಮ ದಕ್ಷತೆಯಿಂದ ಪೊಲೀಸ್ ಇಲಾಖೆಯಲ್ಲಿ ಭರವಸೆ ಮೂಡಿಸಿ ಸದ್ಯ ವೃತ್ತ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದೀಪ್, ಸಾಮಾಜಿಕ ಕಳಕಳಿ ಮೆರೆಯುತ್ತಲೇ ತಮ್ಮ ಸಾರ್ಥಕತೆಯ ಪಯಣವನ್ನು ಮುಂದುವರಿಸಿದ್ದಾರೆ. ಕೊರೋನಾ ಪಿಡುಗು ಜನತೆಯನ್ನು ಕಾಡಿದ ಸಂದರ್ಭದಲ್ಲಿ ಕಷ್ಟದಲ್ಲಿದ್ದ ಬಡವರಿಗೆ ಮನೆಮನೆಗೂ ಖುದ್ದಾಗಿ ಹೋಗಿ ತಮ್ಮ ಸ್ವಂತ ಖರ್ಚಿನಲ್ಲಿ ದಿನಸಿ, ಆಹಾರವನ್ನು ವಿತರಿಸಿದ್ದಾರೆ. ಪ್ರಚಾರ, ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ಇದಾಗಿತ್ತು ಎಂಬುದು ಗಮನಾರ್ಹ. ಇಂದಿನ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವವರ ಸಂಖ್ಯೆ ಅತಿ ವಿರಳವಾಗಿರುವಾಗ ಅಪರೂಪದ ಮಾಣಿಕ್ಯನಂತೆ ಇವರು ಸಾಧಕರ ಪಟ್ಟಿಗೆ ಸೇರಿಕೊಳ್ಳುತ್ತಾರೆ.




