‘ಲವ್ ಮಾಕ್ಟೇಲ್’ ಸಿನಿಮಾ ಖ್ಯಾತಿಯ ತಾರಾ ದಂಪತಿ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಮದುವೆಯಾದ ಮೇಲೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಇವರಿಬ್ಬರು ‘ಲವ್ ಬರ್ಡ್ಸ್’ ಎಂಬ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.
ನಿರ್ದೇಶಕ ಪಿ ಸಿ ಶೇಖರ್ ಇವರಿಬ್ಬರನ್ನು ಒಂದೇ ಸಿನಿಮಾದಲ್ಲಿ ತೆರೆಯ ಮೇಲೆ ತರಲು ಸಜ್ಜಾಗುತ್ತಿದ್ದಾರೆ. ‘ರೋಮಿಯೋ’, ‘ರಾಗ’ ಅಂತಹ ಸಿನಿಮಾಗಳನ್ನು ನೀಡಿರುವ ಇವರು, ‘ಲವ್ ಮಾಕ್ಟೇಲ್’ ಜೋಡಿಗೆ ಸಿನಿಮಾ ಮಾಡಲಿದ್ದು, ಈಗಾಗಲೇ ಈ ಸಿನಿಮಾಕ್ಕೆ ‘ಲವ್ ಬರ್ಡ್ಸ್’ ಎಂದು ಹೆಸರಿಡಲಾಗಿದೆ.
ಈ ಜೋಡಿಯ ‘ಲವ್ ಮಾಕ್ಟೇಲ್’ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಇದೀಗ ಇವರಿಬ್ಬರು ಮತ್ತೆ ಒಂದಾಗುತ್ತಿದ್ದಾರೆ. ‘ಮದುವೆಗೆ ಮುನ್ನ ಪ್ರೀತಿ ಮಾಡುವವರಿಗಿಂತ ಮದುವೆಯಾದ ಮೇಲೆ ತಮ್ಮ ಪತ್ನಿ ಅಥವಾ ಪತಿಯನ್ನು ಪ್ರೀತಿಸುವವರು ಇರುತ್ತಾರೆ. ಅಂತಹ ಒಂದು ಜೋಡಿಯ ಕಥೆಯೇ ‘ಲವ್ ಬರ್ಡ್ಸ್’ ಸಿನಿಮಾ. ಇದರ ಜತೆಗೆ ಮೊದಲೆಲ್ಲಾ ಮಹಿಳೆಯರು ಪತಿಯ ದುಡಿಮೆಯ ಮೇಲೆ ಅವಲಂಬಿತರಾಗುತ್ತಿದ್ದರು. ಈಗ ಅದು ಬದಲಾಗಿದೆ. ಕೆಲಸಕ್ಕೆ ಹೋಗಿ ತಾವೇ ದುಡಿಯುವ ಗೃಹಿಣಿಯರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿ ಗೃಹಿಣಿ ದುಡಿಯಲು ಆರಂಭಿಸಿದರೆ ಬದುಕು ಮತ್ತು ಆಲೋಚನಾ ಶೈಲಿ ಎಲ್ಲವೂ ಬದಲಾಗಿರುತ್ತವೆ. ಈ ಬದಲಾವಣೆಯಲ್ಲಿ ಬರುವ ಸಣ್ಣ ಸಣ್ಣ ಸಮಸ್ಯೆಗಳನ್ನು ನಿರ್ವಹಿಸಿ, ಪತಿ-ಪತ್ನಿಯ ನಡುವೆ ಪ್ರೀತಿಯೇ ಅಂತಿಮ ಎಂದು ಸಾರುವ ಕಥೆ ಇದಾಗಿದೆ. ಇದರಲ್ಲಿ ದುಡಿಯುವ ಗೃಹಿಣಿಯಾಗಿ ಮಿಲನಾ ನಾಗರಾಜ್ ಪ್ರತಿನಿಧಿಸಲಿದ್ದಾರೆ ಎಂದು ನಿರ್ದೇಶಕ ಪಿ.ಸಿ. ಶೇಖರ್ ತಿಳಿಸಿದ್ದಾರೆ.
‘ನಾವು ಲವ್ ಮಾಕ್ಟೇಲ್ ಸಿನಿಮಾ ಮಾಡಿದಾಗಿನಿಂದಲೂ ಸಹ ಹಲವು ಸಿನಿಮಾಗಳ ಆಫರ್ ಬರುತ್ತಲೇ ಇವೆ. ಈ ಕಥೆ ನನಗೆ ಇಷ್ಟವಾಯಿತು. ಜತೆಗೆ ಪಿ. ಸಿ. ಶೇಖರ್ ಸಿನಿಮಾಗಳನ್ನು ಉತ್ತಮವಾಗಿ ನಿರೂಪಿಸುತ್ತಾರೆ. ಈ ಕಾರಣದಿಂದಾಗಿ ನಾನು ‘ಲವ್ ಬರ್ಡ್ಸ್’ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ನಟಿ ಮಿಲನಾ ನಾಗರಾಜ್ ಹೇಳಿದ್ದಾರೆ.
ಇನ್ನು ಈ ಸಿನಿಮಾದ ಶೂಟಿಂಗ್ ಇದೇ ಸೋಮವಾರದಿಂದ ಆರಂಭವಾಗಲಿದ್ದು, ಬೆಂಗಳೂರಿನ ಎಚ್ಎಂಟಿ ಫ್ಯಾಕ್ಟರಿಯಲ್ಲಿ 18 ಸೆಟ್ ಹಾಕಿ ಒಂದೇ ಶೆಡ್ಯೂಲ್ನಲ್ಲಿ ಚಿತ್ರೀಕರಣ ಮುಗಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಇದು ಪಿ. ಸಿ. ಶೇಖರ್ ಮತ್ತು ಅರ್ಜುನ್ ಜನ್ಯರ 9ನೇ ಕಾಂಬಿನೇಶನ್ ಆಗಿದೆ. ‘ಲವ್ ಬರ್ಡ್ಸ್ ಮ್ಯೂಸಿಕಲ್ ಲವ್ ಸ್ಟೋರಿ. ಇದರಲ್ಲಿ ನಾಯಕ ಮತ್ತು ನಾಯಕಿಯ ಕೋಪ, ಪ್ರೀತಿ, ಸಂತೋಷವನ್ನು ವ್ಯಕ್ತಪಡಿಸುವಂತಹ ಹಾಡುಗಳಿವೆ’ ಎಂದು ಪಿ. ಸಿ. ಶೇಖರ್ ತಿಳಿಸಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

