ಅದು ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು. ಅಂದು ಅಲ್ಲಿ ನಡೆದಿದ್ದ ಹಬ್ಬದ ವಾತಾವರಣವೇ ಇಂದೂ ಸಹ ಸೃಷ್ಟಿಯಾಗಿತ್ತು. ಯಾಕಂದ್ರೆ ಅಲ್ಲಿ ಅಪ್ಪು ಅವರ ಕಂಚಿನ ಪ್ರತಿಮೆಯ ಅನಾವರಣವಾಗಿತ್ತು. ಸಂಜೆಯಿಂದಲೇ ನೆರೆದಿದ್ದ ಅಪ್ಪು ಅಭಿಮಾನಿಗಳ ಹರ್ಷಕ್ಕೆ ಎಲ್ಲೆ ಇರಲಿಲ್ಲ.
ಅಪ್ಪು ಅಪ್ಪು ಅಪ್ಪು ಅಂತ ಅಭಿಮಾನಿಗಳ ಜಯಘೋಷ…..ಅಭಿಮಾನಿಗಳನ್ನ ನೋಡೋಕಂತಲೇ ಬಂದಿದ್ದ ರಾಘಣ್ಣ…..ರಾಘಣ್ಣನವರ ಅಮೃತ ಹಸ್ತದಿಂದ ಅನಾವರಣಗೊಂಡಿತು ಅಪ್ಪು ಅವರ ಕಂಚಿನ ಪ್ರತಿಮೆ…ಹೌದು ಇದೆಕ್ಕೆಲ್ಲಾ ಸಾಕ್ಷಿಯಾಗಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆ. ಹೊಸಪೇಟೆಯಲ್ಲಿ ಅಪ್ಪು ಹುಡುಗರು ಹಾಗೂ ಡಾ.ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಪುನೀತ್ ರಾಜಕುಮಾರ್ ಅವರ 7.4ಅಡಿ ಎತ್ತರದ ಕಂಚಿನ ಪ್ರತಿಮೆಯ ಅನಾವರಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕಾಗಿಯೇ ಬೆಂಗಳೂರಿನಿಂದ ಆಗಮಿಸಿದ್ದ ಪುನೀತ್ ರಾಜಕುಮಾರ್ ಸಹೋದರ, ರಾಘವೇಂದ್ರ ರಾಜಕುಮಾರ್ ಅವರು ಪುನೀತ್ ಅವರ ಕಂಚಿನ ಪ್ರತಿಮೆಯನ್ನು ರಿಮೋಟ್ ಮೂಲಕ ಅನಾವರಣಗೊಳಿಸಿದ್ರು. ಈ ವೇಳೆ ಮಾತನಾಡಿದ ಅವ್ರು, ಹೊಸಪೇಟೆ ಅಭಿಮಾನಿಗಳ ಪ್ರೀತಿ ಯಾವತ್ತೂ ನಮ್ಮ ಮನೆ ಮೇಲೆ ಕಮ್ಮಿಯಾಗಿಲ್ಲ. ನಿಮ್ಮ ಅಭಿಮಾನಕ್ಕೆ ನಾವೆಲ್ಲಾ ಋಣಿ ಎಂದರು.
ಇದಕ್ಕೂ ಮುನ್ನಾ ವೇದಿಕೆಗೆ ಆಗಮಿಸಿದ ರಾಘಣ್ಣ ಮಂಡಿಯೂರಿ ಅಭಿಮಾನಿಗಳಿಗೆ ನಮಸ್ಕರಿಸಿದ್ರು. ಅಲ್ಲದೆ ಪುನೀತ್ ರಾಜಕುಮಾರ್ ಪ್ರತಿಮೆಯ ಪಾದಕ್ಕೆ ಮುತ್ತಿಟ್ಟು ತಮ್ಮನಿಗೆ ಪ್ರೀತಿ ಅರ್ಪಿಸಿದ್ರು. ಹೊಸಪೇಟೆಯ ಅಭಿಮಾನಿಗಳ ಅಭಿಮಾನಕ್ಕೆ ರಾಘಣ್ಣ ಅವರ ಕಣ್ಣಾಲಿಗಳು ತುಂಬಿಬಂದವು. ಪುಟ್ಟ ಮಕ್ಕಳು ನೃತ್ಯದ ಮೂಲಕ ಅಭಿಮಾನ ವ್ಯಕ್ತಪಡಿಸಿದ್ರು. ಕೊನೆಗೆ ನೀನೇ ರಾಜಕುಮಾರ ಹಾಡಬೇಕಾದ್ರೆ ವೇದಿಕೆ ಮೇಲಿದ್ದ ಡ್ಯಾನ್ಸ್ ಅಕಾಡೆಮಿಯ ಮಕ್ಕಳೂ ಸಹ ಅಪ್ಪು ಅವರನ್ನು ನೆನೆದು ಅತ್ತರು. ಈ ವೇಳೆ ಮಾತನಾಡಿದ ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಅಪ್ಪು ಅವರೊಂದಿಗೆ ನಾವಿದ್ದೆವು ಎನ್ನೋದೇ ನಮ್ಮ ಭಾಗ್ಯ ಎಂದರು.
ಇದಕ್ಕೂ ಮುನ್ನಾ ಹೊಸಪೇಟೆಯ ವಡಕರಾಯನ ಗುಡಿಯಿಂದ ಮೆರವಣಿಗೆ ಮಾಡಲಾಯಿತು. ಇನ್ನು ಅಪ್ಪು ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲವಾಗಿತ್ತು. ಅಪ್ಪು ಅಪ್ಪು ಅಪ್ಪು ಎನ್ನುವ ಘೋಷಣೆಯಂತೂ ಮುಗಿಲುಮುಟ್ಟಿತ್ತು. ಸಚಿವ ಆನಂದ್ ಸಿಂಗ್, ಅವರ ಪುತ್ರ ಸಿದ್ಧಾರ್ಥ ಸಿಂಗ್, ನಾಯಕನಟ ಅಜಯ್ ರಾವ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೊಸಪೇಟೆಯ ಇತಿಹಾಸದಲ್ಲಿ ಮೈಲಿಗಲ್ಲಾಗುವಂತಹ ಕಾರ್ಯಕ್ರಮ ನಡೆದದ್ದಂತೂ ಸತ್ಯ.