ಬೆಂಗಳೂರು: ಆರಂಭದಲ್ಲಿ ವೈಫಲ್ಯ ಅನುಭವಿಸಿ ನಂತರ ಪುಟಿದೆದ್ದ ಭಾರತ ತಂಡ ಇಂದು ನಿರ್ಣಾಯಕ ಐದನೆ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ದ.ಆಫ್ರಿಕಾ ತಂಡವನ್ನು ಎದುರಿಸಲಿದೆ.
ಭಾನುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಕದನ ಕುತೂಹಲ ಮೂಡಿಸಿದೆ. ಮೊದಲೆರಡು ಪಂದ್ಯಗಳನ್ನು ದ.ಆಫ್ರಿಕಾ ಗೆದ್ದುಕೊಂಡಿತು. ತಿರುಗೇಟು ನೀಡಿದ ಭಾರತ ಸತತ ಎರಡು ಪಂದ್ಯಗಳನ್ನು ಗೆದ್ದು ಸರಣಿ ಸಮಬಲ ಸಾಧಿಸಿತು. ದ.ಆಫ್ರಿಕಾ ಎದುರು ಪಂತ್ ಪಡೆ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.
ಕಳೆದ ಪಂದ್ಯ ಗಾಯಗೊಂಡಿದ್ದ ನಾಯಕ ಟೆಂಬಾ ಬಾವುಮೆ ಇಂದಿನ ಪಂದ್ಯದಲ್ಲಿ ಆಡದಿದ್ದರೆ ತಂಡಕ್ಕೆ ನಷ್ಟವಾಗಲಿದೆ. ಕಳೆದ ಎರಡು ಪಂದ್ಯಗಳಿಂದ ದ.ಆಫ್ರಿಕಾ ತಂಡದ ಬ್ಯಾಟಿಂಗ್ ವಿಭಾಗ ವೈಫಲ್ಯ ಅನುಭವಿಸಿದೆ. ಭಾರತದ ಬೌಲಿಂಗ್ ವಭಾಗ ಬಲಿಷ್ಠವಾಗಿ ಕಾಣುತ್ತಿದೆ.
ಮೊದಲ ಎರಡು ಪಂದ್ಯಗಳನ್ನು ಕೈಚೆಲ್ಲಿದಕ್ಕೆ ಭಾರೀ ಟೀಕೆಗಳನ್ನು ಎದುರಿಸಿದ್ದ ನಾಯಕ ರಿಷಬ್ ಪಂತ್ ನಂತರ ಚೆನ್ನಾಗಿ ನಿಭಾಯಿಸಿ ತಂಡವನ್ನು ಯಶಸ್ವಿಯಗಿ ಮುನ್ನಡೆಸಿದರು. ಒಂದು ವೇಳೆ ಇಂದಿನ ಪಂದ್ಯ ಗೆದ್ದರೆ ರಿಷಬ್ ಪಂತ್ ನಾಯಕತ್ವದ ರೇಸ್‍ನಲ್ಲಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಜೊತೆ ಪೈಪೋಟಿ ನಡೆಸಲಿದ್ದಾರೆ.
ತಂಡದ ಆರಂಭಿಕರಾದ ಋತುರಾಜ್ ಗಾಯಕ್ವಾಡ್, ತಮ್ಮ ತಂತ್ರಗಾರಿಕೆ ಬಳಸಿ ಅತ್ಯುತ್ತಮ ದಾಳಿಯನ್ನು ಎದುರಿಸು ತಾಕತ್ತು ಪ್ರದರ್ಶಿಸಬೇಕಿದೆ. ಇನ್ನು ಇಶಾನ್ ಕಿಶನ್ ಅವರ ಹೊಡೆತಗಳಲ್ಲಿ ಹೆಚ್ಚಿನ ಆಯ್ಕೆಯಿಲ್ಲ. ಬೌನ್ಸರ್ ಎಸೆತಗಳಿಗೆ ಉತ್ತರಿಸಬೇಕಿಲ್ಲ.
ಮೂರನೆ ಕ್ರಮಾಂಕದಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್ ಕಳಪೆ ಪ್ರದರ್ಶನ ನೀಡಿದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಇವರ ಜಾಗವನ್ನು ಸೂರ್ಯಕುಮಾರ್ ಪಡೆಯುವ ಸಾಧ್ಯತೆ ಹೆಚ್ಚಿದೆ.
ಇನ್ನು ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಮಾಡಿ ತಮ್ಮ ಪ್ರದರ್ಶನದ ವಿಮಿರ್ಶೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಹೊಸ ಚೆಂಡಿನಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಆವೇಶ್ ಖಾನ್ ಮೊದಲ ಮೂರು ಪಂದ್ಯಗಳಲ್ಲಿ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದ್ದರು. ಆದರೆ ಮೊನ್ನೆ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದರು. ಸ್ಪಿನ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೆ ಚಾಹಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಸಂಭಾವ್ಯ ತಂಡಗಳು
ಭಾರತ ತಂಡ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ನಾಯಕ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಯಜ್ವಿಂದರ್ ಚಾಹಲ್.
ದ.ಆಫ್ರಿಕಾ ತಂಡ: ಕ್ವಿಂಟಾನ್ ಡಿಕಾಕ್, ಟೆಂಬಾ ಬಾವುಮೆ, ಡ್ವೇನ್ ಪ್ರಿಟೋರಿಯಸ್, ವೆನ್ ಡೆರ್ ಡುಸೆನ್, ಹನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಹೆನ್ಸನ್, ಕೇಶವ್ ಮಹಾರಾಜ್, ಅನ್ರಿಕ್ ನೊಟ್ರ್ಜೆ, ಲುಂಗು ಗಿಡಿ, ತಾಬ್ರೇಜ್ ಶಂಸಿ.

