Friday, November 7, 2025

Latest Posts

ಭಾರತದ ಕ್ರಿಕೆಟ್ ಹೊಸ ಚರಿತ್ರೆ : ಇತಿಹಾಸ ಸೃಷ್ಟಿಸಿದ ವನಿತೆಯರು!

- Advertisement -

ಭಾರತದ ಮಹಿಳಾ ಕ್ರಿಕೆಟ್‌ ತಂಡವು ಇತಿಹಾಸ ಸೃಷ್ಟಿಸಿದೆ. ವಿಶ್ವಕಪ್‌ ಇತಿಹಾಸದಲ್ಲಿ ಮೂರು ಬಾರಿ ಫೈನಲ್‌ ತಲುಪಿದ್ದ ಭಾರತ, ಈ ಬಾರಿ ಕೊನೆಗೂ ಚೊಚ್ಚಲ ಏಕದಿನ ವಿಶ್ವಕಪ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ವಿಶ್ವಕಪ್ ಗೆದ್ದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಹರ್ಮನ್‌ಪ್ರೀತ್ ಕೌರ್‌ ಅವರ ನಾಯಕತ್ವದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ತೋರಿದ್ದು, ಅವರು ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಭಾರತದ ಮೂರನೇ ಕ್ಯಾಪ್ಟನ್ ಆಗಿ ಚರಿತ್ರೆ ನಿರ್ಮಿಸಿದ್ದಾರೆ.

2005 ಹಾಗೂ 2017ರ ಫೈನಲ್‌ನಲ್ಲಿ ಸೋಲು ಕಂಡಿದ್ದ ಭಾರತ, ಈ ಬಾರಿ ಅದೇ ತಪ್ಪನ್ನು ಪುನರಾವರ್ತಿಸಲಿಲ್ಲ. ನವಿ ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳ ಅಂತರದಿಂದ ಮಣಿಸಿ ಟ್ರೋಫಿ ಎತ್ತಿದೆ. 1973ರಲ್ಲಿ ಆರಂಭವಾದ ಮಹಿಳಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ಮಾತ್ರ ಪ್ರಶಸ್ತಿ ಗೆದ್ದಿದ್ದರೆ, ಇದೀಗ ಭಾರತವೂ ಆ ಪಟ್ಟಿ ಸೇರಿದೆ. ಇಂಗ್ಲೆಂಡ್ ಆರಂಭಿಕ ವರ್ಷಗಳಲ್ಲಿ ಮೇಲುಗೈ ಸಾಧಿಸಿದರೆ, ಆಸ್ಟ್ರೇಲಿಯಾ ನಂತರದ ವರ್ಷಗಳಲ್ಲಿ ಹ್ಯಾಟ್ರಿಕ್ ಜಯಗಳಿಸಿ ಪ್ರಭುತ್ವ ಸಾಧಿಸಿತ್ತು.

ಟೂರ್ನಿಯುದ್ದಕ್ಕೂ ಏರುಪೇರಿನ ಪ್ರದರ್ಶನ ತೋರಿದ್ದ ಭಾರತ ವನಿತೆಯರು ಅಂತಿಮ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಪ್ರದರ್ಶಿಸಿದರು. ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್‌ ಗಳಿಸಿತು. ಪ್ರತಿಯಾಗಿ ಆಫ್ರಿಕಾ ತಂಡ 45.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಪಂದ್ಯ ಕೊನೆಯ ಕ್ಷಣದಲ್ಲಿ ಹರ್ಮನ್‌ಪ್ರೀತ್ ಕೌರ್ ಡಿ ಕ್ಲೆರ್ಕ್ ಅವರ ಕ್ಯಾಚ್ ಹಿಡಿದ ಕ್ಷಣದಲ್ಲೇ ಭಾರತ ಚಾಂಪಿಯನ್ ಆಗಿ ಘೋಷಿಸಲ್ಪಟ್ಟಿತು. ಆ ಕ್ಷಣವು 1983ರ ಕಪಿಲ್ ದೇವ್ ಹಾಗೂ 2011ರ ಮಹೇಂದ್ರ ಸಿಂಗ್ ಧೋನಿ ಗೆಲುವಿನ ನೆನಪುಗಳನ್ನು ಜೀವಂತಗೊಳಿಸಿತು.

ಫೈನಲ್ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದ ಕ್ರಿಕೆಟಿಗ ರೋಹಿತ್ ಶರ್ಮಾ ಭಾರತ ಗೆದ್ದ ಕ್ಷಣದಲ್ಲಿ ಭಾವುಕರಾಗಿ ಚಪ್ಪಾಳೆ ತಟ್ಟಿದರು. ಪ್ರೇಕ್ಷಕರ ನಡುವೆ ಉಲ್ಲಾಸದ ಅಲೆ ಎದ್ದಿತು. ಮಹಿಳಾ ಕ್ರಿಕೆಟ್‌ನ ಈ ಐತಿಹಾಸಿಕ ಗೆಲುವು ಕೇವಲ ಒಂದು ಟ್ರೋಫಿ ಅಲ್ಲ, ಭಾರತದ ನಾರಿಯರ ಶಕ್ತಿ, ಶ್ರದ್ಧೆ ಮತ್ತು ಶ್ರೇಷ್ಠತೆಗೆ ದೊರೆತ ಗೌರವ. 2025ರ ಈ ವಿಜಯ ಭಾರತದ ಕ್ರಿಕೆಟ್ ಇತಿಹಾಸದ ಹೊಸ ಅಧ್ಯಾಯವನ್ನು ಬರೆಯಿತು. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಈಗ ವಿಶ್ವಚಾಂಪಿಯನ್.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss