ನವದೆಹಲಿ: ಕೇಂದ್ರ ಸರ್ಕಾರ ರಾಷ್ಟ್ರಧ್ವಜ ಸಂಹಿತೆಯಲ್ಲಿ ಮಹತ್ವದ ತಿದ್ದುಪಡಿ ತಂದಿದ್ದು, ತ್ರಿವರ್ಣ ಧ್ವಜವನ್ನು ಹಗಲು ಮಾತ್ರವಲ್ಲದೇ ರಾತ್ರಿ ಕೂಡ ಹಾರಿಸಲು ಅನುಮತಿ ನೀಡಿದೆ. ಇದಲ್ಲದೇ ಕೈಮಗ್ಗದಿಂದ ಮಾತ್ರ ತಯಾರಿಸಲಾಗುತ್ತಿದ್ದ ಖಾದಿ ರಾಷ್ಟ್ರಧ್ವಜದ ಜೊತೆಗೆ ಯತ್ರ ಬಳಸಿ ತಯಾರಿಸಿದಂತ ಪಾಲಿಸ್ಟರ್ ಧ್ವಜದ ಬಳಕೆಗೂ ಅನುಮತಿ ನೀಡಿದೆ.
ಆಗಸ್ಟ್ 13 ರಿಂದ 15ರವರೆಗೆ ದೇಶಾದ್ಯಂತ ಹರ್ ಘರ್ ತಿರಂಗಾ ಯೋಜನೆಯನ್ನು ಕೇಂದ್ರ ಸರ್ಕಾರದ ಘೋಷಿಸಿದಂತ ಬೆನ್ನಲ್ಲೇ, ಧ್ವಜ ಸಂಹಿತೆಯಲ್ಲಿ ಮಹತ್ವದ ಬದಲಾವಣೆಯನ್ನು ಶನಿವಾರ ಮಾಡಿದೆ. ಭಾರತದ ಧ್ವಜ ಪ್ರದರ್ಶನ, ಹಾರಾಟ ಹಾಗೂ ಬಳಕೆಯು ಭಾರತದ ಧ್ವಜ ಸಂಹಿತೆ-2002 ಹಾಗೂ ರಾಷ್ಟ್ರೀಯ ಗೌರವ ಅವಮಾನಗಳ ತಡೆ ಕಾಯ್ದೆ -1971 ಮೂಲಕ ನಿರ್ಧಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಧ್ವಜ ಸಂಹಿತೆಗೆ ಹೊಸ ತಿದ್ದುಪಡಿ ತಂದಿದೆ.
ಈ ತಿದ್ದುಪಡಿ ಮಸೂದೆಯ ಅನುಸಾರ ಧ್ವಜವನ್ನು ತೆರೆದ ಸ್ಥಳಗಳಲ್ಲಿ, ಮನೆಗಳಲ್ಲಿ ಹಗಲು-ರಾತ್ರಿ ಹಾರಿಸ ಬಹುದಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಹೇಳಿದ್ದಾರೆ.




