ಟ್ರಿನಿಡಾಡ್: ವೆಸ್ಟ್ ಇಂಡೀಸ್ ಎದುರಿನ ಮುಂಬರುವ ಟಿ20 ಸರಣಿಗಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ದಂಡು ಟ್ರಿನಿಡಾಡ್‍ಗೆ ಆಗಮಿಸಿದೆ.
ಪ್ರಸ್ತುತ ಸಾಗುತ್ತಿರುವ ಏಕದಿನ ಸರಣಿಗೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿತ್ತು. ಟಿ20 ಸರಣಿಯಲ್ಲಿ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಏಕದಿನ ಸರಣಿಯಲ್ಲಿ ಅವರ ಬದಲಿಗೆ ಶಿಖರ್ ಧವನ್ ನಾಯಕತ್ವ ವಹಿಸಿದ್ದರು.
ಸರಣಿಯಲ್ಲಿ ಐದು ಟಿ20 ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯವು ಜುಲೈ 29ರ ಶುಕ್ರವಾರ ನಡೆಯಲಿದೆ. ಮೂರು ಪಂದ್ಯಗಳು ಟ್ರಿನಿಡಾಡ್‍ನಲ್ಲಿ ನಡೆಯಲಿದ್ದು, ಉಳಿದೆರಡು ಪಂದ್ಯಗಳು ಬಾಸೆಟೆರ್ರೆಯಲ್ಲಿ ನಡೆಯುವವು.
ಏಕದಿನ ಸರಣಿಯಲ್ಲಿ ಪಾಲ್ಗೊಳ್ಳದ ರಿಷಬ್ ಪಂತ್, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್ ಕೂಡ ರೋಹಿತ್ ಜತೆಗೆ ಆಗಮಿಸಿದ್ದಾರೆ.
ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ಅಕ್ಷರ ಪಟೇಲ್ ಮುಂತಾಗಿ ಇನ್ನು ಕೆಲವು ಆಟಗಾರರು ಈಗಾಗಲೇ ಏಕದಿನ ತಂಡದ ಜತೆಗಿದ್ದಾರೆ. ಅವರು ಏಕದಿನ ಸರಣಿ ಮುಗಿದೊಡನೆ ಟಿ20 ತಂಡವನ್ನು ಸೇರುವರು.
ಅಶ್ವಿನ್ ಮತ್ತು ಕುಲದೀಪ್ ಯಾದವ್ ಬಹುಕಾಲದ ಬಳಿಕ ಟಿ20ಯಲ್ಲಿ ದೇಶವನ್ನು ಪ್ರತಿನಿಸಲಿದ್ದಾರೆ. ಇವರಿಬ್ಬರೂ ಐಪಿಎಲ್‍ನಲ್ಲಿ ಉತ್ತಮ ನಿರ್ವಹಣೆ ತೋರಿದ ಹಿನ್ನೆಲೆಯಲ್ಲಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಏಕದಿನ ಸರಣಿಯನ್ನು ಭಾರತವು ಈಗಾಗಲೆ ಗೆದ್ದಿದ್ದು ಕೊನೆಯ ಪಂದ್ಯವು ಇಂದು ನಡೆಯಲಿದೆ.