ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ತವರು ಕ್ಷೇತ್ರವಾಗಿ, ನಾಡಿನಲ್ಲಿ ಪ್ರಸಿದ್ಧಿಗಳಿಸಿರುವಂತ ಸೊರಬ ತಾಲೂಕಿನಲ್ಲಿ, ರಾಜಕೀಯ ಸ್ವಹಿತಾಸಕ್ತಿ ಮೇಲಾಟ ಜೋರಾಗಿದೆ. ಈ ಪರಿಣಾಮ, ಶಾಸಕ ಕುಮಾರ್ ಬಂಗಾರಪ್ಪ ಅವರ ನಾಲ್ಕು ವರ್ಷ 4 ತಿಂಗಳ ಅಧಿಕಾರಾವಧಿಯಲ್ಲಿ ಬರೋಬ್ಬರಿ 12 ತಹಶೀಲ್ದಾರ್ ವರ್ಗಾವಣೆಯಾಗಿದ್ದಾರೆ.
ಹೌದು.. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ 4 ವರ್ಷ 4 ತಿಂಗಳ ಅಧಿಕಾರಾವಧಿಯಲ್ಲಿ 12 ತಹಶೀಲ್ದಾರರು ವರ್ಗಾವಣೆಗೊಂಡು ಐತಿಹಾಸಿಕ ದಾಖಲೆ ಬರೆದಿದೆ. ಅಲ್ಲದೇ ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸ ಕೆಲಸಗಳು ಸಕಾಲದಲ್ಲಿ ಆಗದೇ, ಜನರು ನಿತ್ಯವೂ ಕಚೇರಿಗೆ ಅಲೆದಾಡುತ್ತಾ ಹೈರಾಣಾಗಿರುವಂತೆ ಆಗಿದೆ.
ಈ ಬಗ್ಗೆ ಮಾತನಾಡಿರುವಂತ ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಶಾಸಕ ಮಧು ಬಂಗಾರಪ್ಪ, ಶಾಸಕ ಕುಮಾರ್ ಬಂಗಾರಪ್ಪ ಅವರ ರಾಜಕಾರಣವನ್ನು ಜನಸೇವೆಗೆ ಬಳಸಿಕೊಳ್ಳೋ ಬದಲಾಗಿ, ಹಣದ ದಂಧೆಗೆ ಬಳಸಿಕೊಂಡಿದ್ದಾರೆ. ತಹಶೀಲ್ದಾರ್ ಸೇರಿದಂತೆ ತಮ್ಮ ಹಣ ವ್ಯವಹಾರಕ್ಕೆ ಸಹಕರಸದ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗಿದೆ. ಕ್ಷೇತ್ರಕ್ಕೆ ಬಂದ ಅನುದಾನದಲ್ಲಿ ಅರ್ಧದಷ್ಟು ಕೊಳ್ಳೆಯಾಗಿದ್ದರಿಂದ ಅಭಿವೃದ್ಧಿಯೂ ಅಧೋಗತಿ ತಲುಪಿದೆ ಎಂಬುದಾಗಿ ಕಿಡಿಕಾರಿದ್ದಾರೆ.
ಅಂದಹಾಗೇ ಶಾಸಕ ಕುಮಾರ್ ಬಂಗಾರಪ್ಪ ಅವರು ಕಳೆದ 4 ವರ್ಷ 4 ತಿಂಗಳಿನಿಂದ ಸೊರಬ ತಾಲೂಕಿನಲ್ಲಿ ಶಾಸಕರಾಗಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಗ್ರೇಡ್ 2 ತಹಶೀಲ್ದಾರ್ ಶಿವಾನಂದ ಪಿ ರಾಣೆ ವರ್ಗಾವಣೆಯಾದ ಬಳಿಕ, ಬೇರೆಯಾರೂ ಸೊರಬಕ್ಕೆ ಬರೋದಕ್ಕೆ ಹಿಂದೇಟು ಹಾಕ್ತಾ ಇದ್ದಾರಂತೆ. ಸರಾಸರಿ ಒಬ್ಬ ತಹಶೀಲ್ದಾರ್ 4 ತಿಂಗಳು ಕರ್ತವ್ಯ ನಿರ್ವಹಿಸಿದ್ದರೇ, ಏಳೆಂಟು ತಹಶೀಲ್ದಾರ್ ಧ್ವಜ ಹಾರಿಸೋದಕ್ಕೂ ಅವಕಾಶಸಿಕ್ಕಿಲ್ಲ.
ತಾಲೂಕಿನಲ್ಲಿ ರಾಜಕೀಯ, ವೈಯಕ್ತಿಕ ಹಿತಾಸಕ್ತಿಗೆ ತಹಶೀಲ್ದಾರರ ಬದಲಾವಣೆಯಾದರೇ ವಿನಹಾ, ಜನರ ಸಮಸ್ಯೆಗಳನ್ನು ಪರಿಹಾರವಾಗಲಿಲ್ಲ ಎನ್ನುವ ಕಾರಣಕ್ಕೆ ಯಾವೊಬ್ಬ ತಹಶೀಲ್ದಾರ್ ವರ್ಗಾವಣೆಯಾಗಿಲ್ಲ ಎಂಬುದು ತಾಲೂಕಿನ ಜನರ ಮಾತಾಗಿದೆ.




