State News:
ಅಕ್ಟೊಬರ್ 13ರಿಂದ 16ರವರೆಗೂ ಕೆಆರ್ ಪೇಟೆಯ ತ್ರಿವೇಣಿ ಸಂಗಮದ ನಡೆಯಲಿರುವ ಮಹಾಕುಂಭಮೇಳದ ಪ್ರಯುಕ್ತ ಇಂದು ಸಂಗಮದಲ್ಲಿ ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು, ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು, ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಅಕ್ಟೋಬರ್ 13,14,15,16 ರಂದು ಕೆಆರ್ ಪೇಟೆಯ ಅಂಬಿಗರಹಳ್ಳಿ, ಸಂಗಾಪುರ ಹಾಗೂ ಪುರದ ಕಾವೇರಿ-ಹೇಮಾವತಿ-ಲಕ್ಷ್ಮಣ ತೀರ್ಥಗಳ ಸಮಾಗಮವಾಗುವ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಬಾಮೇಳ ನಡೆಯಲಿದೆ. ಪ್ರತಿದಿನ ಗಂಗಾರತಿ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಮಲೆ ಮಹಾದೇಶ್ವರ ಬೆಟ್ಟದಿಂದ ತ್ರಿವೇಣಿ ಸಂಗಮದವರೆಗೂ ಜ್ಯೋತಿಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಕೈಗೊಂಡಿರುವ ಸಿದ್ದತೆಗಳ ಬಗ್ಗೆ ಪರಿಶೀಲಿಸಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಹೇಳಿಕೆ:
9 ವರ್ಷಗಳ ಹಿಂದೆ ಯಾವುದೇ ಪೂರ್ವ ಸಿದ್ದತೆಗಳಿಲ್ಲದೇ, ದಿಢೀರ್ ಆಗಿ ರೂಪುಗೊಂಡು ಯಶಸ್ವಿಯಾಗಿ ಕುಂಭಮೇಳ ನಡೆದಿತ್ತು. ಆಗ ಸಂಪೂರ್ಣ ಜವಾಬ್ದಾರಿಯನ್ನ ತೆಗೆದುಕೊಂಡಿದ್ದ ನಾರಾಯಣಗೌಡರು ಯಶಸ್ವಿಗೊಳಿಸಿದ್ದರು. ಈಗ ಸಚಿವರಾಗಿ ಮತ್ತೊಮ್ಮೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದು, ಉತ್ತಮವಾಗಿ ರೂಪಿಸುತ್ತಿದ್ದಾರೆ. ಮಹಾಕುಂಭಮೇಳದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಎಲ್ಲರ ಸುಯೋಗ. ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಗಂಗಾರತಿ, ಸ್ನಾನಘಟ್ಟಗಳನ್ನು ನಿರ್ಮಿಸಲಾಗುತ್ತಿದ್ದು, ಸ್ನಾನ ಘಟ್ಟಗಳನ್ನು ಬಳಸುವಾಗ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲರೂ ಇದಕ್ಕೆ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರ ಹೇಳಿಕೆ: ಕುಂಭಮೇಳ ಆಯೋಜನೆ ಕುರಿತು ಈ ಹಿಂದೆ ವಿಜಯನಗರದ ಮಠದಲ್ಲಿ ಪೂರ್ವಭಾವಿ ಸಭೆ ನಡೆದಿತ್ತು. ಇಂದು ಅದಕ್ಕೆ ಪೂರಕವಾಗಿ ಮತ್ತೊಂದು ಸಭೆ ನಡೆದಿದೆ. ಸರ್ಕಾರ, ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗ್ತಿದೆ. ನದಿ ನೀರಿಗೆ, ಗಾಳಿಗೆ ಯಾವುದೇ ಜಾತಿ ಇಲ್ಲ. ಜಾತಿಬೇಧ, ಪಕ್ಷಬೇಧ ಮರೆತು ಎಲ್ಲರೂ ಒಟ್ಟಾಗಿ ಸೇರಿ ಇದನ್ನು ಯಶಸ್ವಿಗೊಳಿಸಬೇಕು. ಇದು ಜನಮಾನಸಕ್ಕೆ ಮುಟ್ಟುವ ಕಾರ್ಯಕ್ರಮವಾಗಲಿ ಎಂದು ಚುಂಚಶ್ರೀಯವರು ಹೇಳಿದರು.
ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರ ಹೇಳಿಕೆ:
ಮಹಾಕುಂಭಮೇಳವನ್ನು ಜಗದ್ಗುರಗಳ ಸೂಚನೆಯಂತೆ ಯಾವ ರೀತಿ ಮಾಡಬೇಕು ಎಂಬುದರ ಕುರಿತು ಇಂದು ಪೂರ್ವಭಾವಿ ಸಭೆ ನಡೆಸಲಾಯಿತು. ಮಹಾಕುಂಭಮೇಳ ನಡೆಯುತ್ತಿರುವುದು ನಮ್ಮೆಲ್ಲರ ಪುಣ್ಯ. 9 ವರ್ಷಗಳ ಹಿಂದೆ ಅದ್ಭುತವಾಗಿ ನಡೆದಿತ್ತು. ಇದೀಗ ಮತ್ತೆ ಜಗದ್ಗುರುಗಳ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸೋಣ. ಇದು ಕೆಆರ್ ಪೇಟೆಗೆ ಮಾತ್ರವಲ್ಲ, ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳಿಗೆ ಹೆಮ್ಮೆಯ ಕಾರ್ಯಕ್ರಮ. ನಾನು ಸೇವಕನಾಗಿ ದುಡಿಯೋಕೆ ಬಂದಿದ್ದು, ರಾಜಕಾರಣದಿಂದ ಏನನ್ನು ಮಾಡಬೇಕಿಲ್ಲ. ಸೇವಕನಾಗಿ ದುಡಿದು ಕುಂಭಮೇಳವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗೋಣ. ಈ ಕಾರ್ಯಕ್ರಮಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಬರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವಿಗೊಳಿಸಬೇಕು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ಸಚಿವ ಕೆ.ಗೋಪಾಲಯ್ಯರವರ ಹೇಳಿಕೆ:ಇದು ಮಹಾದೇಶ್ವರರು ಓಡಾಡಿರೋ ಜಾಗ. 2013 ರ ಬಳಿಕ ಈಗ ಕುಂಭಮೇಳ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ. ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿದ್ದು, ಎಲ್ಲರೂ ಜೊತೆಗೂಡಿ ಯಶಸ್ವಿಗೊಳಿಸೋಣ ಎಂದು ಸಚಿವ ಗೋಪಾಲಯ್ಯ ಅವರು ಹೇಳಿದರು.
ಕಾಗಿನೆಲೆ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ, ಎಂಎಲ್ಸಿ ಕೇಶವ ಪ್ರಸಾದ್, ಮಾಜಿ ಎಂಎಲ್ಸಿ ಮಾದೇಗೌಡ, ಜಿಲ್ಲಾಧಿಕಾರಿ ಎಸ್ ಅಶ್ವಥಿ, ಎಸ್ಪಿ ಯತೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.