National News:
ಬಾಲಿವುಡ್ ಖ್ಯಾತ ನಿರ್ಮಾಪಕಿ ಹಾಗೂ ನಿರ್ದೇಶಕಿ ಏಕ್ತಾ ಕಪೂರ್ ಬಂಧನಕ್ಕೆ ಬಿಹಾರ ಕೋರ್ಟ್ ವಾರೆಂಟ್ ಜಾರಿ ಮಾಡಿದೆ. ಸಮನ್ಸ್ ಜಾರಿಯಾದರೂ ಏಕ್ತಾ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾ.ವಿಕಾಸ್ ಕುಮಾರ್ ಅವರು ಬಂಧನದ ವಾರೆಂಟ್ ಜಾರಿ ಮಾಡಿದ್ದಾರೆ. ಕೇವಲ ಏಕ್ತಾ ಕಪೂರ್ ಮಾತ್ರವಲ್ಲ, ಅವರ ತಾಯಿ ಶೋಭಾ ಕಪೂರ್ ಮೇಲೂ ಬಂಧನದ ವಾರೆಂಟ್ ಜಾರಿಯಾಗಿದೆ ಎಂದು ತಿಳಿದು ಬಂದಿದೆ.
ಏಕ್ತಾ ಕಪೂರ್ ಅವರ ಬಾಲಾಜೀ ಬ್ಯಾನರ್ ಅಡಿ ‘ಎಕ್ಸ್.ಎಕ್ಸ್.ಎಕ್ಸ್’ ವೆಬ್ ಸೀರಿಸ್ ತಯಾರಾಗಿದ್ದು, ಈ ಸರಣಿಯಲ್ಲಿ ಯೋಧರಿಗೆ ಅವಮಾನ ಮಾಡಲಾಗಿದೆ ಎಂದು ಮತ್ತು ಯೋಧರ ಕುಟುಂಬದ ಭಾವನೆಗಳಿಗೆ ಘಾಸಿ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ನಿವೃತ್ತ ಸೈನಿಕ ಶಂಭು ಕುಮಾರ್ ಅವರು ಏಕ್ತಾ ಕುಟುಂಬದ ಮೇಲೆ ದೂರು ದಾಖಲಿಸಿದ್ದರು. 2020ರಲ್ಲಿ ಬಿಹಾರದಲ್ಲಿ ದೂರು ದಾಖಲಾಗಿತ್ತು. ಕೋರ್ಟ್ ಗೆ ಹಾಜರಾಗದ ಹಿನ್ನೆಯಲ್ಲಿ ವಾರೆಂಟ್ ಜಾರಿ ಮಾಡಲಾಗಿದೆ ಎಂದು ವಕೀಲರು ಸ್ಪಷ್ಟನೆ ನೀಡಿದ್ದಾರೆ.




