ಬೆಂಗಳೂರು: ನಾಪತ್ತೆಯಾಗುವುದಕ್ಕೂ ಮುನ್ನ ಉದ್ಯಮಿ ಸಿದ್ದಾರ್ಥ್ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಕರೆ ಮಾಡಿ ಭೇಟಿ ಮಾಡಬೇಕೆಂದು ತಿಳಿಸಿದ್ದು, ಏನೋ ಮುಖ್ಯವಾದ ವಿಷಯ ಚರ್ಚಿಸಬೇಕು ಅಂತ ಹೇಳಿದ್ದರು ಅಂತ ಖುದ್ದು ಡಿಕೆಶಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಡಿಕೆಶಿ, ಸಿದ್ದಾರ್ಥ್ ಓರ್ವ ಧೈರ್ಯವಂತ ವ್ಯಕ್ತಿ, ಆತ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ ಅಂತ ಹೇಳಿದ್ರು. ಇನ್ನು ನಾಪತ್ತೆಯಾಗಿರುವ ಸಿದ್ಧಾರ್ಥ್ ನೀರಿನಲ್ಲಿದ್ದಾರೋ ಅಥವಾ ಯಾರಾದರೂ ಕರೆದುಕೊಂಡು ಹೋಗಿದ್ದಾರೋ ಗೊತ್ತಿಲ್ಲ ಈ ಕುರಿತು ಸೂಕ್ತ ತನಿಖೆ ನಡೆಯಬೇಕು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಅಂತ ಒತ್ತಾಯಿಸಿದ್ರು.
ಇದೇ ವೇಳೆ ಮಾತನಾಡಿದ ಡಿಕೆಶಿ, ಮೊನ್ನೆಯಷ್ಟೇ ಅಂದರೆ ಜು. 28ರಂದು ಸಿದ್ದಾರ್ಥ್ ನನಗೆ ಕರೆ ಮಾಡಿದ್ದರು. ತುರ್ತಾಗಿ ಬಹಳ ಮುಖ್ಯವಾದ ವಿಷಯವನ್ನು ನಿಮ್ಮ ಬಳಿ ಮಾತನಾಡಬೇಕು. ನಿಮ್ಮನ್ನು ಯಾವ ಸಮಯದಲ್ಲಿ ಭೇಟಿಯಾಗಬಹುದು ಅಂತ ಕೇಳಿದ್ದರು. ಆದರೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುುತ್ತಿದ್ದರಿಂದ ನಾನು ಎರಡು ದಿನಗಳೊಳಗೆ ಭೇಟಿ ಮಾಡೋಣ ಅಂತಲೂ ಸಿದ್ದಾರ್ಥ್ ಗೆ ತಿಳಿಸಿದ್ದೆ ಅಂತ ಡಿಕೆಶಿ ಮಾಹಿತಿ ನೀಡಿದ್ರು. ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ಡಿಕೆಶಿ, ಸಿದ್ದಾರ್ಥ್ ಬರೆದಿದ್ದಾನೆ ಎನ್ನಲಾಗುತ್ತಿರುವ ಪತ್ರ ನಿಜವಾಗಿಯೂ ಅವರೇ ಬರೆದಿದ್ದಾರೋ ಅಥವಾ ಬೇರೆ ಯಾರಾದರೂ ಉದ್ದೇಶಪೂರ್ವಕವಾಗಿ ಈ ಪತ್ರವನ್ನು ಹುಟ್ಟುಹಾಕಿದ್ದಾರೋ ಅನ್ನೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.