ಮಂಡ್ಯ: ಕರ್ನಾಟಕ ಹಾಲು ಉತ್ಪಾದನೆ ಡೈರಿ ಅಭಿವೃದ್ಧಿ ಮೂಲಕ ಹಸಿರು ಕ್ರಾಂತಿಯ ನಂತರ ಕ್ಷೀರ ಕ್ರಾಂತಿಯಾಗುತ್ತಿದೆ. ಕರ್ನಾಟಕ ಕ್ಷೀರ ಕ್ರಾಂತಿಯಲ್ಲಿ ತನ್ನದೇ ಕೊಡುಗೆ ನೀಡಿದೆ. ಹಗಲಿರುಳು ರೈತರು ಶ್ರಮಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಇಂದು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಗೆಜ್ಜಲಗೆರೆ ಆವರಣದಲ್ಲಿ ಆಯೋಜಿಸಿದ್ದ ಮೆಗಾ ಡೈರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಅವರು ಮಾತನಾಡಿದ್ದು, ಮೈ ಶುಗರ್ ನಲ್ಲಿ ಬರುವ ವರ್ಷ ಎಥನಾಲ್ ಘಟಕ ಸ್ಥಾಪನೆ ಮಾಡಿ ರೈತರಿಗೆ ವರದಾನವಾಗುವ ರೀತಿಯಲ್ಲಿ ಪರಿವರ್ತಿಸಲಾಗುವುದು ಎಂದು ಅವರು ಹೇಳಿದರು. ಹಾಲು ಉತ್ಪಾದನೆ ಮಾಡುವ ರೈತ ಮಹಿಳೆಯರಿಗೆ ವಿಶೇಷವಾಗಿ ಬೊಮ್ಮಾಯಿಯವರು ಅಭಿನಂದನೆಗಳನ್ನು ಸಲ್ಲಿಸಿದರು.
ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ, 2 ಲಕ್ಷ ಪ್ರೈಮರಿ ಡೇರಿ ನಿರ್ಮಿಸಲು ತೀರ್ಮಾನ : ಅಮಿತ್ ಶಾ
ರೈತನ ಬದುಕು ಅನಿಶ್ಚಿತತೆಯಿಂದ ಕೂಡಿರುವ ಈ ಸಂದರ್ಭದಲ್ಲಿ ಅವನ ಬದುಕಿಗೆ ನಿಶ್ಚಿತತೆ ತಂದುಕೊಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೃಷಿ ಇಲಾಖೆಯಿಂದ ಸಹಕಾರವನ್ನು ಬೇರ್ಪಡಿಸಿ, ಸಹಕಾರ ಇಲಾಖೆ ಸೃಜಿಸಿ ಭಾರತ ದೇಶದಲ್ಲಿ ಸಹಕಾರ ರಂಗಕ್ಕೆ ಶಕ್ತಿ ತುಂಬಿದ್ದು, ಇದರಿಂದ ಒಂದು ಕ್ರಾಂತಿಯಾಗಲಿದೆ. ಹಲವಾರು ಸುಧಾರಣೆಗಳನ್ನು ತರುವ ಪ್ರಯತ್ನ ಗಳನ್ನು ಮಾಡುತ್ತಿದ್ದಾರೆ. ಸಮಗ್ರ ಕೃಷಿಯಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಅದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರದ್ದು ಬೆಂಗಳೂರಿನ ಪ್ರಥಮ ಮೆಗಾ ಡೈರಿ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಿದೆ. ಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲ್ಲಿಂದ ಪ್ರಾರಂಭವಾದ ಮೆಗಾ ಡೈರಿ ಇಂದು ಎಲ್ಲೆಡೆ ಸ್ಥಾಪನೆಯಾಗುತ್ತಿದೆ. ಸ್ವತಂತ್ರವಾಗಿ ಹಾಲು ಉತ್ಪಾದಿಸಿ, ಸಂಸ್ಕರಿಸಿ, ಪ್ಯಾಕ್ ಮಾಡಿ, ವಿವಿಧ ಪದಾರ್ಥಗಳನ್ನು ತಯಾರಿಸಿ ಸ್ವಾವಲಂಬನೆಯ ವ್ಯವಸ್ಥೆ ಮೆಗಾ ಡೈರಿಯಲ್ಲಿ ಆಗುತ್ತಿದೆ. ನಮ್ಮ ಪ್ರಧಾನಮಂತ್ರಿಗಳ ಆತ್ಮ ನಿರ್ಭರ್ ಭಾರತ್ ಕನಸಿಗೆ ಕರ್ನಾಟಕದ ಹಾಲು ಒಕ್ಕೂಟಗಳು ದೊಡ್ಡ ಕೊಡುಗೆಯನ್ನು ಕೊಡುತ್ತಿವೆ ಎಂದು ಬೊಮ್ಮಾಯಿ ಅವರು ಹೇಳಿದರು.