ಬೆಂಗಳೂರು(ಫೆ.7): ಪ್ರಕೃತಿಯ ಮುನಿಸು ಎಷ್ಟರಮಟ್ಟಿಗೆ ಸಾವು, ನೋವುಗಳಿಗೆ ಕಾರಣವಾಗುತ್ತದೆ ಅನ್ನೋದಕ್ಕೆ ಟರ್ಕಿ, ಸಿರಿಯಾ ದೇಶಗಳಲ್ಲಿ ಉಂಟಾದ ಭೂಕಂಪವೇ ಸಾಕ್ಷಿಯಾಗಿದೆ. ಹೌದು, ಈ ದುರಂತ ಅಕ್ಷರಶಃ ಇಲ್ಲಿನ ನಿವಾಸಿಗಳಿಗೆ ಬಿಗ್ ಶಾಕ್ ನೀಡಿದ್ದು, ಭೂಮಿಯ ಒಡಲು ಬಗೆದಷ್ಟು ಅವಶೇಷಗಳು ಕಂಡುಬರುತ್ತಿವೆ, ಈ ಘಟನೆ ಇಡೀ ಪ್ರಪಂಚವೇ ಟರ್ಕಿ, ಸಿರಿಯಾ ದೇಶದತ್ತ ಮುಖಮಾಡುವತ್ತ ಮುಂದಾಗಿದೆ ಅಂದ್ರೆ ಖಂಡಿತಾ ತಪ್ಪಾಗಲಾರದು. ಈ ದುರಂತದಲ್ಲಿ ಮರುಗಿದ ಅದೆಷ್ಟೋ ಜೀವಗಳು ಕಣ್ಣೀರಿನಲ್ಲಿ ಮುಳುಗಿ ಹೋಗಿವೆ.
ಇದೀಗ, ಈ ದೇಶದಲ್ಲಿ ಒಂದು ಮನಕಲುಕುವ ಘಟನೆ ಕೂಡ ನಡೆದದ್ದು, ಎಲ್ಲರ ಕಣ್ಣಂಚಲಿ ನೀರು ತರಿಸಿದೆ. ಹೌದು, ಇನ್ನೇನು ಮಗುವಿಗೆ ಜನ್ಮ ನೀಡುವ ಸಂತಸದಲ್ಲಿದ್ದ ಹೆಣ್ಣೊಬ್ಬಳು, ಈ ಭೂಕಂಪನದ ಹೊಡೆತಕ್ಕೆ ಭೂಮಿಯ ಮೇಲಿರುವ ಕಟ್ಟಡ ಕುಸಿದು, ಅವಶೇಷದಡಿ ಸಿಲುಕಿ ತನ್ನ ಪ್ರಾಣವನ್ನೇ ಅರ್ಪಿಸಿ, ಪುಟ್ಟ ಮಗುವಿಗೆ ಜನ್ಮ ನೀಡಿದ್ದಾಳೆ. ಮಣ್ಣಿನ ಅಡಿ ಹೂತು ಹೋಗಿದ್ದ ಮಹಿಳೆ ತುಂಬು ಗರ್ಭಿಣಿ, ಮಣ್ಣಿನ ಅಡಿ ಸಿಲುಕಿ ಹೊರ ಬರಲಾಗದೇ ನೋವಿನ ಮಧ್ಯೆ, ಬದುಕೋ, ಸಾವೋ ಎಂಬ ಸಂದರ್ಭದಲ್ಲಿ ತಾನು ಪ್ರಾಣ ತ್ಯಜಿಸಿ, ಮುದ್ದಾದ ಮಗುವಿಗೆ ಜನ್ಮ ನೀಡಿ, ಕೊನೆಯುಸಿರೆಳೆದಿದ್ದಾಳೆ.
ಈ ಒಂದು ವೀಡಿಯೋವನ್ನು ಸಿರಾಜ್ ನೂರಾಣಿ ಎಂಬ ಖಾತೆಯನ್ನು ಹೊಂದಿದ್ದ ವ್ಯಕ್ತಿಯೊಬ್ಬರು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಟರ್ಕಿಯ ಗಜಿಯಾಂಟೆಪ್ ನಗರ ಭೂಕಂಪನದ ಕೇಂದ್ರ ಬಿಂದುವಾಗಿದೆ. ಸಿರಿಯಾ ಅಂತರ್ಯುದ್ಧದ ಬಳಿಕ ಟರ್ಕಿಗೆ ಲಕ್ಷಾಂತರ ಜನ ವಲಸೆ ಕೂಡ ಬಂದಿದ್ದರು. ಇದೀಗ ಟರ್ಕಿ ರಣರಂಗವಾಗಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡು ಎಲ್ಲೆಲ್ಲೂ ನೋವಿನ ಆರ್ತನಾದ ಕೇಳಿಬರುತ್ತಿದೆ.