Banglore News : ಸಚಿವ ಸ್ಥಾನ ವಂಚಿತಗೊಂಡಿದ್ದಕ್ಕೆ ಅಸಮಧಾನಗೊಂಡಿರುವ ಹಿಂದುಳಿದ ಸಮುದಾಯದ ಪ್ರಭಾವಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಅತಿ ಹಿಂದುಳಿದ ಸಮುದಾಯಗಳ ಜಾಗೃತ ವೇದಿಕೆ ಅಧ್ಯಕ್ಷರಾದ ಎಂ.ಸಿ ವೇಣುಗೋಪಾಲ್ ಗುರುವಾರ ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಇತ್ತೀಚೆಗಷ್ಟೆ ತಮ್ಮ ಹೇಳಿಕೆಯಿಂದ ವಿವಾದ ಸೃಷ್ಟಿಸಿಕೊಂಡಿದ್ದ ಬಿ.ಕೆ ಹರಿಪ್ರಸಾದ್, ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನದಿಂದಲೂ ದೂರ ಉಳಿದಿದ್ದರು.
ಈ ನಿಟ್ಟಿನಲ್ಲಿ ಇಂದು ಹರಿಪ್ರಸಾದ್ ಅವರನ್ನು ಭೇಟಿ ಮಾಡಿದ ರಾಜ್ಯ ಗೃಹಸಚಿವ ಡಾ. ಜಿ ಪರಮೇಶ್ವರ್ ಅವರು ಸುದೀರ್ಘ ಎರಡು ಗಂಟೆಗಳ ಕಾಲ ಚರ್ಚಿಸಿ ಮನವೊಲಿಕೆಯ ಪ್ರಯತ್ನ ಮಾಡಿದರು. ರಾಜ್ಯ ಅತಿವೃಷ್ಟಿ ಮತ್ತು ಪ್ರವಾಹದ ಸಂಕಷ್ಟಕರ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಜನತೆಯ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ. ಯಾವುದೇ ಅಸಮಧಾನಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳೋಣ. ರಾಜ್ಯದ ಪ್ರಜೆಗಳು ಕಾಂಗ್ರೆಸ್ ಪಕ್ಷದ ಮೇಲೆ ಅಪಾರ ನಂಬಿಕೆಯಿಂದ ದೊಡ್ಡ ಮಟ್ಟದ ಜನಾದೇಶ ನೀಡಿದ್ದು, ಪಕ್ಷದ ಎಲ್ಲ ನಾಯಕರೂ ಒಗ್ಗೂಡಿ ಕೆಲಸ ಮಾಡಬೇಕಿರುವ ಅಗತ್ಯವಿದೆ ಎಂದು ಪರಮೇಶ್ವರ್ ಹಾಗೂ ವೇಣುಗೋಪಾಲ್ ಹರಿಪ್ರಸಾದ್ ಅವರನ್ನು ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ.
ಸದ್ಯದಲ್ಲೇ ಸೂಕ್ತ ಸ್ಥಾನಮಾನ:ರಾಜ್ಯ ಸಚಿವ ಸಂಪುಟದಲ್ಲಿ ಹರಿಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ದೊರೆಯದಿರುವ ಕುರಿತು ತಮಗೂ ಬೇಸರವಿದೆ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಸ್ಥಾನ ಮಾನ ಖಂಡಿತ ಸಿಗಲಿದೆ. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದು ಹರಿಪ್ರಸಾದ್ ಅವರಿಗೆ ಮನ್ನಣೆ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಪರಮೇಶ್ವರ್ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
S muniswamy: ತನ್ವೀರ್ ಸೇಠ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಎಂದು ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ