ನಿನ್ನೆ ಕೇರಳದಲ್ಲಿ ನಡೆದ ಗರ್ಭಿಣಿ ಆನೆಯ ಸಾವಿನ ಬಗ್ಗೆ ಕ್ರಿಕೇಟಿಗ ವಿರಾಟ್ ಕೊಹ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆ ಕೇರಳದ ಪಲಕ್ಕಡ ಜಿಲ್ಲೆಯ ಕಾಡೊಂದರಲ್ಲಿ ಆಹಾರ ಹುಡುಕಿ ಹೊರಟಿದ್ದ ಆನೆ ಅಲ್ಲೇ ಸಿಕ್ಕಿದ್ದ ಅನಾನಸ್ ತಿಂದಿತ್ತು. ಆದ್ರೆ ಆ ಅನಾನಸ್ ಹಣ್ಣಿನಲ್ಲಿ ಸ್ಪೋಟಕವನ್ನಿರಿಸಿದ್ದ ಕ್ರೂರಿಗಳು ರಕ್ಕಸ ಕೃತ್ಯ ಮೆರೆದಿದ್ದು, ಇದನ್ನು ತಿಂದ ಆನೆ ನಿಂತಲ್ಲೇ ಪ್ರಾಣ ಬಿಟ್ಟಿತ್ತು. ಬಳಿಕ ಆನೆಯ ಶವಪರೀಕ್ಷೆ ಮಾಡಿದಾಗ ಆನೆ ಗರ್ಭಿಣಿಯಾಗಿತ್ತು ಎಂದು ತಿಳಿದು ಬಂದಿದೆ.
ಈ ವಿಷಯದ ಬಗ್ಗೆ ದೇಶದ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿತ್ತು. ತಪ್ಪಿತಸ್ಥರನ್ನ ಹುಡುಕಿ ಕಠಿಣ ಶಿಕ್ಷೆ ಕೊಡಬೇಕೆಂದು ಹಲವರು ಆಗ್ರಹಿಸಿದ್ದರು. ಈ ಬಗ್ಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿ ಹಲವು ಆಟಗಾರರು ತೀವ್ರ ಬೇಸರ ಹೊರಹಾಕಿದ್ದಾರೆ.
ಈ ವಿಷಯದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬೇಸರ ವ್ಯಕ್ತಪಡಿಸಿರುವ ಕೊಹ್ಲಿ, ಕೇರಳದಲ್ಲಿ ಏನಾಯಿತು ಎಂಬುದರ ಬಗ್ಗೆ ಕೇಳಿ ಭಯವಾಯಿತು. ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳೋಣ ಮತ್ತು ಈ ಹೇಡಿತನದ ಕೃತ್ಯಗಳಿಗೆ ಅಂತ್ಯ ಹಾಡೋಣ ಎಂದಿದ್ದಾರೆ.
ಇನ್ನು ವಿರಾಟ್ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನ ಹುಡುಕಿ, ತಕ್ಕ ಶಿಕ್ಷೆ ನೀಡಲು ನಾವೆಲ್ಲ ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ ಎಂದಿದ್ದಾರೆ.
ಕ್ರಿಕೆಟಿಗ ಸುರೇಶ್ ರೈನಾ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಇದೊಂದು ನಾಚಿಕೆಗೇಡಿನ ಕೆಲಸವೆಂದು ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇರಳ ಸಿಎಂಗೆ ಟ್ವೀಟ್ ಮೂಲಕ ರೈನಾ ಮನವಿ ಮಾಡಿದ್ದಾರೆ.
ರಿಷಬ್ ಪಂತ್, ಕುಲದೀಪ್ ಯಾದವ್, ಸುನೀಲ್ ಚೇಟ್ರಿ, ಕ್ರಿಕೇಟಿಗ ಧೋನಿ ಪತ್ನಿ ಸಾಕ್ಷಿ ಧೋನಿ ಸೇರಿ ಹಲವರು ಈ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಒಟ್ಟಾರೆಯಾಗಿ ಆಹಾರ ಅರಸಿ ಬಂದಿದ್ದ ಮುಗ್ಧ ಪ್ರಾಣಿಯ ಮೇಲೆ ಕ್ರೂರತ್ವ ಪ್ರಯೋಗಿಸಿದ ಪಾಪಿಗಳಿಗೆ ಕಠಿಣ ಶಿಕ್ಷೆಯಾಗಲಿ, ಮುಂದೆ ಇಂತಹ ಹೀನ ಕೃತ್ಯಕ್ಕೆ ಯಾರೂ ಮುಂದಾಗದಿರಲಿ ಎಂಬುದೇ ಎಲ್ಲರ ಆಗ್ರಹವಾಗಿದೆ.