ಕರ್ನಾಟಕ ಟಿವಿ ಮಂಡ್ಯ : ಕೃಷ್ಣರಾಜಪೇಟೆ ತಾಲ್ಲೂಕಿನ ಭೂವೈಕುಂಠ, ಭೂವರಾಹಸ್ವಾಮಿ ಕ್ಷೇತ್ರ ವರಹನಾಥಕಲ್ಲಹಳ್ಳಿಗೆ ಹರಿದುಬಂದ ಭಕ್ತಸಾಗರ. ಸೂಪರ್ ಹಿಟ್ ಚಿತ್ರ ಕರುಣಿಸುವಂತೆ ದೇವರ ಮೊರೆಹೋದ ಸುಪ್ರಸಿದ್ಧ ಚಲನಚಿತ್ರ ನಾಯಕನಟಿ ಮೇಘನಾ ಗಾಂವ್ಕರ್ ಹಾಗೂ ಚಿತ್ರ ನಿರ್ಮಾಪಕ ರಘು ಭಟ್.
ರೇವತಿ ನಕ್ಷತ್ರದ ಅಂಗವಾಗಿ ಇಂದು ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ, ಭೂವೈಕುಂಠ ಎಂದೇ ಪ್ರಖ್ಯಾತವಾದ ಭೂವರಾಹಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ನಡೆದವು. ಒಂದು ಸಾವಿರ ಲೀಟರ್ ಹಾಲು, 500 ಲೀಟರ್ ಕಬ್ಬಿನ ಹಾಲು, ಎಳನೀರು, ಜೇನುತುಪ್ಪ, ಶ್ರೀಗಂಧ ಹಾಗೂ ಗಂಗಾಜಲದಿಂದ ಅಭಿಷೇಕ ಮಾಡಿ ಲಿಲ್ಲಿ, ಜಾಜಿ, ಸಂಪಿಗೆ, ಸುಗಂಧರಾಜ, ಕನಕಾಂಬರ, ಗುಲಾಬಿ, ಪವಿತ್ರ ಪತ್ರೆಗಳು, ತುಳಸಿ, ಕಮಲದ ಹೂವು, ಮಲ್ಲಿಗೆ ಸೇವಂತಿಗೆ, ಕೇದಿಗೆ ಸೇರಿದಂತೆ 58 ಬಗೆಯ ವಿವಿಧ ಪುಷ್ಪಗಳಿಂದ ಸ್ವಾಮಿಗೆ ಪುಷ್ಪಾಭಿಷೇಕ ಮಾಡಲಾಯಿತು…17ಅಡಿ ಎತ್ತರವಿರುವ ಸಾಲಿಗ್ರಾಮ ಕೃಷ್ಣಶಿಲೆಯಲ್ಲಿ ಅರಳಿರುವ ಭವ್ಯವಾದ, ದೇಶದಲ್ಲಿಯೇ ಅಪರೂಪದ್ದಾಗಿರುವ ವರಹಾಸ್ವಾಮಿಯು ಭೂದೇವಿಯನ್ನು ತನ್ನ ಎಡತೊಡೆಯ ಮೇಲೆ ಕುಳ್ಳರಿಸಿಕೊಂಡು ಬೇಡಿ ಬಂದ ಭಕ್ತರಿಗೆ ಅನುಗ್ರಹಿಸಿ ಆಶೀರ್ವದಿಸುತ್ತಿದ್ದಾನೆ..
ಇಂದು ನಡೆದ ವಿಶೇಷ ಪೂಜೆಯಲ್ಲಿ ಚಲನಚಿತ್ರ ನಟಿ ಮೇಘನಾ ಗಾಂವ್ಕರ್, ಚಲನಚಿತ್ರ ನಿರ್ಮಾಪಕ ರಘು ಭಟ್ ಸೇರಿದಂತೆ ಸಾವಿರಾರು ಭಕ್ತರು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಪವಿತ್ರ ಅಭಿಷೇಕವನ್ನು ಕಣ್ತುಂಬಿಕೊಂಡರು. ಮೈಸೂರಿನ ಪರಕಾಲ ಮಠದ ಶ್ರೀಗಳು ರೇವತಿ ನಕ್ಷತ್ರದ ಅಭಿಷೇಕದ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಟ್ರಸ್ಟಿ ಶ್ರೀನಿವಾಸರಾಘವನ್ ಪೂಜಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು, ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಅವಧಾನಿಗಳು ವೇದ ಮಂತ್ರಗಳನ್ನು ಪಠಿಸಿದರು …ಕೊರೋನಾ ಮಹಾಮಾರಿಯ ಅಟ್ಟಹಾಸದ ನಿಯಂತ್ರಣಕ್ಕಾಗಿ ವಿಶೇಷವಾದ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ