ಮಂಡ್ಯ: ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸುರೇಶ್ ಗೌಡ, ಸಚಿವ ನಾರಾಯಣಗೌಡರಿಗೆ ಮೈಷುಗರ್ ಕಂಪೆನಿಯ ವಿಚಾರವಾಗಿ ಎಚ್ಚರಿಕೆ ನೀಡಿದ್ದಾರೆ.

ಮೈಶುಗರ್ ಬಗ್ಗೆ ಇವರ ಆಲೋಚನೆ ಮೊದಲು ಏನಿತ್ತು , ಈಗ ಏನಿದೆ ಎಂಬುದನ್ನು ಬಹಿರಂಗ ಪಡಿಸಬೇಕಾಗುತ್ತದೆ ಎಂದು ಸಚಿವ ನಾರಾಯಣಗೌಡರಿಗೆ ಶಾಸಕ ಸುರೇಶ್ ಗೌಡ ಎಚ್ಚರಿಕೆ ನೀಡಿದ್ದಾರೆ.
ಮೊದಲು ಸರ್ಕಾರಿ ಸ್ವಾಮ್ಯದಲ್ಲಿರಬೇಕು ಎಂದವರು ಈಗ ಯಾಕೆ ಒ& ಎಂ ಅಂತಿದ್ದಾರೆ ಅದರ ಹಿಂದಿನ ಮರ್ಮವೇನು ಎಂದು ನನಗೆ ಗೊತ್ತಿದೆ. ನಾರಾಯಣಗೌಡ ಒಬ್ಬ ಅಪ್ರಬುದ್ದ ಸಚಿವ. ನಾನು ಮೂಲತಃ ಕೃಷಿಕ. ನಮ್ಮಪ್ಪ ಕಬ್ಬಿನ ಹಾಲೆಮನೆ ಇಟ್ಟಿದ್ದವರು. ಮಾಹಿತಿ ಇಲ್ಲವಾದರೆ ಪಡೆದು ನಂತರ ಮಾತನಾಡಲಿ. ಇಲ್ಲವಾದಲ್ಲಿ ಖುದ್ದು ಬರಲಿ ನಾನೇ ತಿಳಿಸುತ್ತೇನೆ ಎಂದು ಸಚಿವ ನಾರಾಯಣಗೌಡರ ಹೇಳಿಕೆಗೆ ಶಾಸಕ ಸುರೇಶ್ ಗೌಡ ಟಾಂಗ್ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಸುರೇಶ್ ಗೌಡ ಏನು ಕಬ್ಬು ಬೆಳೆದಿದ್ದಾನ..? ಮೈಶುಗರ್ ಬಗ್ಗೆ ಮಾತನಾಡಲು..? ಎಂದು ಸಚಿವ ನಾರಾಯಣಗೌಡ ಪ್ರಶ್ನಿಸಿದ್ದರು.
ಇದಕ್ಕೆ ಟಾಂಗ್ ನೀಡಿದ ಸುರೇಶ್ ಗೌಡ, ನಾನು ವಿದ್ಯಾರ್ಥಿ ದೆಸೆಯಿಂದಲೂ ಕೃಷಿ ಮಾಡಿದ್ದೇನೆ, ಎಳ್ಳು, ರಾಗಿ, ಭತ್ತ, ಅಲಸಂದೆ ಸೇರಿದಂತೆ ಎಲ್ಲಾ ತರಹ ಬೆಳೆ ಬೆಳೆದಿದ್ದೇನೆ ಎಂದಿದ್ದಾರೆ.
ಇನ್ನು ಸುರೇಶ್ ಗೌಡರಿಗೂ ಮೈಷುಗರ್‌ಗೂ ಸಂಬಂಧವಿಲ್ಲವೆಂದು ನಾರಾಯಣಗೌಡ ಕೊಟ್ಟ ಹೇಳಿಕೆಗೆ ಆಕ್ರೋಶಭರಿತ ಪ್ರತಿಕ್ರಿಯೆ ನೀಡಿದ ಸುರೇಶ್ ಗೌಡ, ನಾಗಮಂಗಲ ಏನು ಪಾಕಿಸ್ತಾನದಲ್ಲಿಲ್ಲ. ಈ ಜಿಲ್ಲೆಯ ಒಂದು ತಾಲೂಕು ಅದರ ಪ್ರತಿನಿಧಿ ಎಂಬುದನ್ನು ಮೊದಲು ಸಚಿವರು ಅರಿಯಲಿ. ನಾನು ಯಾವತ್ತು ನನ್ನ ವೈಯಕ್ತಿಕ ಅಭಿಪ್ರಾಯ ಹೇಳುತ್ತಿಲ್ಲ. ಅದು ಕಬ್ಬು ಬೆಳೆಗಾರರ ಅಭಿಪ್ರಾಯವಷ್ಟೇ. ಕಬ್ಬು ಬೆಳೆದಿರುವವರೇ ಮಾತಾಡಬೇಕು ಎಂಬ ಸಚಿವರ ಹೇಳಿಕ ತಪ್ಪು. ಅದು ಅವರಿಗೆ ಶೋಭೆ ತರಲ್ಲ. ಒಂದೆಡೆ ಸಚಿವ ಲಾಬಿ ನಡೆಸುತ್ತಿದ್ದರೆ ಮತ್ತೊಂದೆಡೆ ಸಂಸದರು ಲಾಭಿ ನಡೆಸುತ್ತಿದ್ದಾರೆ. ಸಿಎಂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಭೆ ಕರೆದಿದ್ದಾಗ ತಮ್ಮ ಅಭಿಪ್ರಾಯ ಹೇಳದೆ ಈಗ ಸಿಎಂ ಜೊತೆ ಗೌಪ್ಯವಾಗಿ ಮಾತನಾಡುವುದರ ಹಿಂದಿನ ರಹಸ್ಯ ಏನು ಎಂಬುದು ಜನತೆಗೆ ಅರ್ಥ ಆಗುತ್ತೆ ಎಂದಿದ್ದಾರೆ.
ಸಂಸದರು ಎಲ್ಲಾ ಶಾಸಕರನ್ನು ಕರೆದುಕೊಂಡು ಸಿಎಂ ಹತ್ತಿರ ಹೋಗಬೇಕಿತ್ತು. ನಾವು ಹೋಗಲು ರೆಡಿ ಇದ್ದೆವು. ಸಂಸದರಿಗೆ ಸಿಎಂ ಸುಲಭವಾಗಿ ಕೈಗೆಟಕುತ್ತಾರೆ, ನಮಗೆ ಸಿಗಲ್ಲ ಅವರು ನಮ್ಮನ್ನು ಕರೆದಿದ್ದರೆ ನಾವು ಹೋಗಿ ನಮ್ಮ ಅಭಿಪ್ರಾಯ ತಿಳಿಸುತ್ತಿದ್ದೆವು. ಜಿಲ್ಲೆಯ ಮಗನಾದ ಸಿಎಂ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಅವರು ಕೊಟ್ಟಿರುವ ಮಾತು ಉಳಿಸಿಕೊಂಡು ಸರ್ಕಾರವೇ ಮೈಶುಗರ್ ನಡೆಸುತ್ತೆ ಎಂಬ ಭರವಸೆ ನನಗಿದೆ ಎಂದರು.
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ
