Political News: ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದಿದ್ದು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಂದುಕೊಂಡಂತೆ 400ಸ್ಥಾನಗಳನ್ನು ಗೆಲ್ಲದಿದ್ದರೂ 240 ಸ್ಥಾನಗಳನ್ನು ಗೆದ್ದು ಮಿತ್ರ ಪಕ್ಷಗಳೊಂದಿಗೆ ಸೇರಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಈ ಮೂಲಕ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಂತೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಪಕ್ಷ ನಾಯಕನಾಗ್ತಾರೆ ಎಂದು ಹೇಳಲಾಗಿತ್ತು ಆದರೆ ಇದೀಗ ರಾಹುಲ್ ವಿಪಕ್ಷ ನಾಯಕನ ಹುದ್ದೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು ಒಟ್ಟು 232 ಸೀಟುಗಳನ್ನು ಗೆದ್ದುಕೊಂಡಿದೆ. ಅದರಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ 99 ಸೀಟು ಗೆದ್ದು 2ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 2019ರಲ್ಲಿ 52 ಸ್ಥಾನ ಗೆದ್ದ ಕಾಂಗ್ರೆಸ್, 2014ರಲ್ಲಿ ಕೇವಲ 44 ಸ್ಥಾನಗಳಲ್ಲಿ ಜಯಗಳಿಸಿತ್ತು. ದಶಕದ ಬಳಿಕ ಕಾಂಗ್ರೆಸ್ ಲೋಕಸಭೆಯಲ್ಲಿ ವಿಪಕ್ಷ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಉತ್ತಮ ನಾಯಕನನ್ನು ವಿಪಕ್ಷ ನಾಯಕನ ಸ್ಥಾನದಲ್ಲಿ ಕೂರಿಸಲು ಕಾಂಗ್ರೆಸ್ ಮುಂದಾಗಿದೆ.
ರಾಹುಲ್ ಗಾಂಧಿ ಬೇಡವೆಂದಿರುವ ಈ ಹುದ್ದೆಗೆ ಮೂವರು ಹಿರಿಯ ನಾಯಕರಲ್ಲಿ ಒಬ್ಬರಿಗೆ ಮಣೆ ಹಾಕಲು ಚಿಂತಿಸಲಾಗುತ್ತಿದೆ. ಈ ಪೈಕಿ ಕುಮಾರಿ ಸೆಲ್ಜಾ, ಗೌರವ್ ಗೊಗೊಯ್, ಮತ್ತು ಮನೀಶ್ ತೀವಾರಿ ಹೆಸರು ಕೇಳಿಬಂದಿದೆ.
2019ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ರಾಹುಲ್ ಮತ್ತೆ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಹೊತ್ತರು. 2024ರ ಲೋಕಸಭಾ ಚುನಾವಣೆಗೂ ಪೂರ್ವಭಾವಿಯಾಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಉತ್ತೇಜನ ನೀಡಲು ಭಾರತ್ ಜೋಡೊ ಯಾತ್ರೆ ಆರಂಭಿಸಿದರು ಮತ್ತು ದೇಶದ ಗಮನ ಸೆಳೆದರು. ಈ ಮೂಲಕ ಪಕ್ಷದ ಆಂತರಿಕ ವಲಯದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿಯೂ ಗುರುತಿಸಿಕೊಂಡಿದ್ದ ರಾಹುಲ್ ಚುನಾವಣಾ ಪಲಿತಾಂಶದ ಬಳಿಕ ಸಂಸತ್ತಿನಲ್ಲಿ ಹೆಚ್ಚಿನ ಜವಾಬ್ಧಾರಿಯನ್ನು ಹೊತ್ತುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆ ಇದೀಗ ಸುಳ್ಳಾಗಿದೆ, 2019ರ ಲೋಕಸಭಾ ಚುನಾವಣೆಯ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಬಳಿಕ ಯಾವುದೇ ಹುದ್ದೆ ಅಲಂಕರಿಸಲು ಒಪ್ಪಿಕೊಳ್ಳುತ್ತಿಲ್ಲ ಎಂದು ವರದಿಯಾಗಿದೆ.



