ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುತ್ತಿರುವ ದರ್ಶನ್ರನ್ನು ಇಂದು ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಭೇಟಿಯಾಗಿದ್ದಾರೆ. ಸಾಮಾನ್ಯವಾಗಿ ಜೈಲಿನಲ್ಲಿ ಒಂದು ವಾರದಲ್ಲಿ ಮೂವರ ಭೇಟಿಗೆ ಮಾತ್ರವೇ ಅವಕಾಶ ಇರುತ್ತದೆ. ದರ್ಶನ್ ಭೇಟಿಗೆ ಬಂದ ಇಬ್ಬರಿಗೂ ಅವರ ಭೇಟಿ ಸಾಧ್ಯವಾಗಿದೆ. ಈಗಾಗಲೇ ತಾಯಿ ಮೀನಾ, ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೇಶ್ ಅವರು ದರ್ಶನ್ ಭೇಟಿ ಮಾಡಿದ್ದಾರೆ. .
ದರ್ಶನ್ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಕ್ಷಿತಾ, ದರ್ಶನ್ ಆರೋಗ್ಯವಾಗಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ದೊರಕಲಿ. ಹದಿನೈದು- ಇಪ್ಪತ್ತು ದಿನಗಳಿಂದ ಏನೇನು ಆಗಿದೆಯೋ, ಅದೆಲ್ಲವೂ ಅತ್ಯಂತ ದುರಾದೃಷ್ಟಕರ ಎಂದು ಹೇಳಿದ್ದಾರೆ.
ಜೈಲಿನಲ್ಲಿ ದರ್ಶನ್ ಹೇಗಿದ್ದಾರೆ ಅನ್ನೋ ಪ್ರಶ್ನೆಗೆ ರಕ್ಷಿತಾ ಪ್ರೇಮ್ ಉತ್ತರಿಸಿದ್ದು, ಇಂತಹ ಸಮಯದಲ್ಲಿ ಯಾರಾದರೂ ಆರಾಮಾಗಿ ಇರುತ್ತಾರಾ? ಎಂದಿದ್ದಾರೆ. ಅವರು ಹೇಗಿದ್ದಾರೆ ಅಂತ ಕೇಳುವುದಕ್ಕೆ ಬಂದಿದ್ವಿ. ಇಂತಹ ಸಮಯದಲ್ಲಿ ನಾರ್ಮಲ್ ಆಗಿ ಇರುವುದಕ್ಕೆ ಆಗುತ್ತಾ? ಎಂದು ಬೇಸರ ಹೊರಹಾಕಿದ್ದಾರೆ.
ಇನ್ನೂ ನಟ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಮಾತನಾಡಿ, ದರ್ಶನ್ ನಮಗೂ ಸ್ನೇಹಿತರು.
ಎಲ್ಲರಿಗೂ ಸ್ನೇಹಿತರು. ಎಲ್ಲದಕ್ಕಿಂತ ಹೆಚ್ಚಾಗಿ ಈ ವಿಚಾರ ಕೋರ್ಟ್ನಲ್ಲಿದೆ. ಹಾಗಾಗಿ ನಾವ್ಯಾರೂ ಏನೂ ಮಾತಾಡುವುದಕ್ಕೆ ಹೋಗಬಾರದು. ರೇಣುಕಾಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೇಳುತ್ತಾ, ಕಾನೂನು ಪ್ರಕಾರ ಏನೆಲ್ಲ ಆಗಬೇಕೋ ಅದೆಲ್ಲ ಆಗುತ್ತಿದೆ. ಕಾನೂನು ಪ್ರಕಾರ ಯಾವುದೂ ದೊಡ್ಡದಲ್ಲ. ಇದರ ಮೇಲೆ ದಯವಿಟ್ಟು ಏನೂ ಕೇಳುವುದಕ್ಕೆ ಹೋಗಬೇಡಿ ಎಂದು ಹೇಳಿದ್ದಾರೆ.
ಕೆಲ ದಿನದ ಹಿಂದೆ ನಟ ವಿನೋದ್ ಪ್ರಭಾಕರ್ ಕೂಡ ದರ್ಶನ್ ಭೇಟಿ ಮಾಡಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಯಾವ ನಟರು ದರ್ಶನ್ ಭೇಟಿ ಮಾಡಿರಲಿಲ್ಲ. ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ಒಬ್ಬೊಬ್ಬರಾಗಿ ನಟ ನಟಿಯರು ಆಗಮಿಸುತ್ತಿದ್ದಾರೆ. ಕೊಲೆ ಪ್ರಕರಣ ಆಗಿರುವ ಹಿನ್ನೆಲೆ ಕೆಲ ಆಪ್ತರು ಅಂತರ ಕಾಯ್ದುಕೊಂಡಿದ್ದಾರೆ.