Political News: ಸಂಸದ ಡಾ.ಕೆ.ಸುಧಾಕರ್, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸಂಸದರಾದ ಬಗ್ಗೆ ಮಾತನಾಡಿರುವ ಡಾ.ಕೆ.ಸುಧಾಕರ್, ಇದು ನನಗೆ ಮತದಾರ ಪ್ರಭುಗಳು ಕೊಟ್ಟಿರುವ ಭಿಕ್ಷೆ. ಬೀಳಿಸುವವರೂ ಅವರೇ, ಏಳಿಸುವವರೂ ಅವರೇ. ನನಗೆ ಇದು ರಾಜಕೀಯ ಪುನರ್ಜನ್ಮವಿದ್ದ ಹಾಗೆ ಎಂದು ತಮ್ಮ ಗೆಲುವಿನ ಬಗ್ಗೆ ಸುಧಾಕರ್ ಮಾತನಾಡಿದ್ದಾರೆ.
ಅಲ್ಲದೇ, ಈ 5 ವರ್ಷದಲ್ಲಿ ಪ್ರಣಾಳಿಕೆಯಲ್ಲಿ ಏನೇನು ಹೇಳಿದ್ದೆವೋ, ಅದೇ ರೀತಿ ನಡೆದುಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಅಷ್ಟೂ ಅಲ್ಲದಿದ್ದರೂ, ಶೇ.80ರಷ್ಟಾದರೂ, ಪ್ರಣಾಳಿಕೆಯಲ್ಲಿ ಇರುವಂತೆ ನಾನು ನನ್ನ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ, ಡಾ.ಕೆ.ಸುಧಾಕರ್, ಪಕ್ಕದ ರಾಜ್ಯದಲ್ಲಿ 5 ಲಕ್ಷ ಕೋಟಿ ಸಾಲ ಮಾಡಿ, ಜಗನ್ ಅವರು ಮನೆಗೆ ಹೋಗಿದ್ದಾರೆ, ಈಗ ಕಾಂಗ್ರೆಸ್‌ನವರು ಇದೇ ರೀತಿಯಾಗುತ್ತಾರೆ ಎಂದು ಡಾ.ಸುಧಾಕರ್ ಭವಿಷ್ಯ ನುಡಿದಿದ್ದಾರೆ.
ಅಲ್ಲದೇ ಬೆಲೆ ಏರಿಕೆ ಮಾಡದೇ, ಸರ್ಕಾರ ನಡೆಸಲು ಸಾಧ್ಯವಿಲ್ಲ. ಅವರ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹಾಳಾಗಿದೆ. ಯಾವುದನ್ನೂ ಆಳವಾಗಿ ಅಧ್ಯಯನ ಮಾಡದೇ, ಕೇವಲ ರಾಜಕೀಯದ ಅಧಿಕಾರಕ್ಕಾಗಿ ಈ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಡುವ ಕೆಲಸ ಮಾಡಲಾಗಿದೆ.
ಇದಕ್ಕೆ ಈಗಲೇ ಪ್ರಾಯಶ್ಚಿತ ಮಾಡಿದರೆ, ಉತ್ತಮ. ಇಲ್ಲವಾಗಿದ್ದಲ್ಲಿ ಮುಂದೆ ವೇತನ ಕೊಡಲು ಸಹ ಸರ್ಕಾರದ ಬಳಿ ದುಡ್ಡಿರುವುದಿಲ್ಲ. ರಾಜ್ಯದ ಅಭಿವೃದ್ಧಿ ಕೆಲಸ ಮಾಡಲು ನಿಮ್ಮ ಬಳಿ ಹಣವಿಲ್ಲ. ನಾಳೆ ಸರ್ಕಾರಿ ನೌಕರರಾದ ಪೊಲೀಸರು, ಶಿಕ್ಷಕರು, ಪೌರಕಾರ್ಮಿಕರು ಸೇರಿ, ಹಲವು ಸರ್ಕಾರಿ ನೌಕರರಿಗೆ ವೇತನ ಕೊಡಲು ಸಹ ದುಡ್ಡಿರುವುದಿಲ್ಲ ಎಂದು ಡಾ.ಸುಧಾಕರ್ ಹೇಳಿದ್ದಾರೆ.
ಇನ್ನು ಕಾಂಗ್ರೆಸ್‌ನಲ್ಲಿ ವರಿಷ್ಠರು ತೀರ್ಮಾನ ಮಾಡಿರುವಂತೆ ಎರಡೂವರೆ ವರ್ಷ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದಿನ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿರಬೇಕು ಎಂದು ತೀರ್ಮಾನವಾಗಿದೆ. ಒಮ್ಮೆ ಒಪ್ಪಂದ ಮಾಡಿಕೊಂಡ ಬಳಿಕ, ಆ ಮಾತಿನಂತೆ ನಡೆದುಕೊಳ್ಳಬೇಕು. ಆಡಿದ ಮಾತು. ಇಟ್ಟ ಹೆಜ್ಜೆ ಎಂದಿಗೂ ಹಿಂದಕ್ಕೆ ಹೋಗಬಾರದು. ಹಾಗಾಗಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ.