Uttar Pradesh ; ಕಾಲ್ತುಳಿತಕ್ಕೆ 121 ಜನರು ಸಾ*ವು ; ಬಾಬಾ ಯಾರು? ಹಿಸ್ಟರಿ ಏನು?

ನಾರಾಯಣ ಸಕರ್ ಹರಿ ಅಥವಾ ಸಕರ್ ವಿಶ್ವ ಹರಿ ಅಲಿಯಾಸ್ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ 121ಕ್ಕೆ ಏರಿಕೆಯಾಗಿದೆ. ಸುಮಾರು 50 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

121 ಜನರ ಸಾವಿಗೆ ಕಾರಣವಾದ ಭೋಲೆ ಬಾಬಾ ಯಾರು?, ಅವರ ಹಿನ್ನೆಲೆ ಏನು ಎಂಬ ಪ್ರಶ್ನೆಗಳು ಸದ್ಯ ಜನರನ್ನು ಕಾಡುತ್ತಿವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಹತ್ರಾಸ್‍ನ ಸಿಕಂದರಾವ್ ಪೊಲೀಸ್ ಠಾಣೆ ವ್ಯಾಪ್ತಿಯ ಫೂಲರಾಯ್ ಗ್ರಾಮದಲ್ಲಿ ಆಯೋಜಿಸಿದ್ದ ಭೋಲೆ ಬಾಬಾರವರ ಸತ್ಸಂಗವನ್ನು ಆಯೋಜಿಸಲಾಗಿತ್ತು. ವಿಶ್ವಹರಿ ಭೋಲೆಬಾಬಾ ಅವರ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಅಷ್ಟೊಂದು ಜನರು ಒಂದೆಡೆ ಸೇರುವಷ್ಟು ಸ್ಥಳಾವಕಾಶ ಅಲ್ಲಿರಲಿಲ್ಲ. ಇದರಿಂದ ಸಲೀಸಾಗಿ ಅತ್ತಿತ್ತ ನಡೆದಾಡಲೂ ಅವಕಾಶವಿರಲಿಲ್ಲ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ತಿಳಿಸಿದ್ದಾರೆ. ಹರಿಯಾಣ, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದಲೂ ಸತ್ಸಂಗ ಕೇಳಿಲು ಭಕ್ತರು ಬಂದಿದ್ದರು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಾರ್ಯಕ್ರಮದ ಸ್ಥಳದಲ್ಲಿ ಅತಿಯಾದ ಸೆಖೆಯಿದ್ದ ಕಾರಣ ಹಲವರು ಹೊರಹೋಗಲು ಪ್ರಯತ್ನಿಸಿದ್ದು ಕಾಲ್ತುಳಿತಕ್ಕೆ ಕಾರಣ ಎನ್ನಲಾಗಿದೆ. ‘ಸತ್ಸಂಗ’ ನಡೆಯುತ್ತಿದ್ದ ಸಂದರ್ಭದಲ್ಲೇ ಕೆಲವರು ಬಿಸಿಲಿನ ಝಳಕ್ಕೆ ಬಳಲಿ ಮೂರ್ಛೆ ಹೋದರು. ಇದರಿಂದ ಆತಂಕಕ್ಕೆ ಒಳಗಾದ ಇತರರು ಒಮ್ಮೆಲೇ ಹೊರಹೋಗಲು ನಿರ್ಧರಿಸಿದ್ರು. ಆದರೆ, ಕಾರ್ಯಕ್ರಮ ನಡೆಸಿದ ಭೋಲೆ ಬಾಬಾ ಅವರ ಕಾರು ಸ್ಥಳದಿಂದ ಹೊರಡುವವರೆಗೂ ಭಕ್ತರನ್ನು ಸ್ಥಳದಿಂದ ಹೋಗದಂತೆ ತಡೆದಿರಿಸಲಾಗಿತ್ತು. ಯಾವಾಗ ಭೋಲೆ ಬಾಬಾ ಕಾರ್ಯಕ್ರಮ ಮುಗಿಸಿ ಹೊರಡಲು ಮುಂದಾದ್ರೆ, ಆಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.

ಹಾಗಾದ್ರೆ ಈ ಬಾಬಾ ಯಾರು ? ಎಲ್ಲಿಂದ ಉದ್ಭವವಾದ? ಇತನ ಪ್ರವಚನಕ್ಕೆ ಅಷ್ಟೊಂದು ಜನ ಹೇಗೆ ಸೇರುತ್ತಾರೆ? ಎನ್ನುವುದನ್ನ ತೋರಿಸ್ತೀವಿ ನೋಡಿ.. ಸ್ವಯಂ ಘೋಷಿತ ಸಂತ ನಾರಾಯಣ ಸಕರ್ ಹರಿ ಅಥವಾ ಸಾಕರ್ ವಿಶ್ವಹರಿ ಅಲಿಯಾಸ್ ಭೋಲೆ ಬಾಬಾ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ಪಟಿಯಾಲಿ ತಹಸಿಲ್‍ನ ಬಹದ್ದೂರ್ ಗ್ರಾಮದಲ್ಲಿ ಜನಿಸಿದರು. ಭೋಲೆ ಬಾಬಾ ತಮ್ಮ ಪ್ರವಚನಗಳಲ್ಲಿ, ತನ್ನನ್ನು ಇಂಟೆಲಿಜೆನ್ಸ್ ಬ್ಯೂರೋ ಮಾಜಿ ಉದ್ಯೋಗಿ ಎಂದು ಬಣ್ಣಿಸಿಕೊಂಡಿದ್ದಾರೆ.

 

ನಾರಾಯಣ ಸಕರ್ ವಿಶ್ವ ಹರಿ ಅಥವಾ ಭೋಲೆ ಬಾಬಾ ಆಗುವ ಮೊದಲು, ಸೂರಜ್ ಪಾಲ್ ಸಿಂಗ್ ಆಗಿದ್ದರು. ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸ್ಥಳೀಯ ಗುಪ್ತಚರ ಘಟಕದಲ್ಲಿ ಕಾನ್‍ಸ್ಟೆಬಲ್ ಆಗಿ 18 ವರ್ಷ ಕೆಲಸ ಮಾಡಿದ್ದರು. ಅವರ ಕೊನೆಯ ಪೋಸ್ಟಿಂಗ್ ಆಗ್ರಾದಲ್ಲಿ ಇತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉದ್ಯೋಗ ತೊರೆದ ನಂತರ ಕಾಸ್‍ಗಂಜ್ ಜಿಲ್ಲೆಯ ಹಳ್ಳಿಯೊಂದರಿಂದ ಬಾಬಾ, ‘ಸತ್ಸಂಗ’ವನ್ನು ಆಯೋಜಿಸಲು ಪ್ರಾರಂಭಿಸಿದರು. ಆರ್ಥಿಕವಾಗಿ ಹಿಂದುಳಿದವರೇ ಭೋಲೇ ಬಾಬಾ ಅನುಯಾಯಿಗಳಾಗಿದ್ದರು. ‘ಸಕರ್ ವಿಶ್ವ ಹರಿ ಬಾಬಾ’ ಎಂದು ಹೆಚ್ಚು ಜನಪ್ರಿಯವಾಗಿರುವ ಬಾಬಾ, ಸಾರ್ವಜನಿಕವಾಗಿ ಸದಾ ಬಿಳಿ ಉಡುಪುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಸತ್ಸಂಗ ನಡೆಸುವಾಗ ಪತ್ನಿಯೊಂದಿಗೆ ಬರುತ್ತಾರೆ. ಕಳೆದ 26 ವರ್ಷಗಳ ಹಿಂದೆ ಬಾಬಾ ತಮ್ಮ ಸರ್ಕಾರಿ ಕೆಲಸವನ್ನು ತೊರೆದು ಧಾರ್ಮಿಕ ಪ್ರವಚನ ನೀಡಲು ಪ್ರಾರಂಭಿಸಿದರು.

 

‘ನರೇನ್ ಸಕಾರ ಹರಿ’ ಎಂದು ಸಂಬೋಧಿಸಲು ಇಷ್ಟಪಡುವ ಬಾಬಾ ಅವರ ಜನಪ್ರಿಯತೆ ಕಾಲಾನುಕ್ರಮದಲ್ಲಿ ಬೆಳೆಯಿತು. ಅವರಿಗೆ ಲಕ್ಷಾಂತರ ಅನುಯಾಯಿಗಳು ಉಂಟಾದರು. ಭೋಲೇ ಬಾಬಾ ಅವರ ಅನುಯಾಯಿಗಳು ಹೆಚ್ಚಾಗಿ ಬ್ರಜ್ ಪ್ರದೇಶದ ಆಗ್ರಾ ಮತ್ತು ಅಲಿಗಢ ವಿಭಾಗಕ್ಕೆ ಸೇರಿದ ಕೆಳ ಆರ್ಥಿಕ ಸ್ತರದ ಜನರು. ಯಾವುದೇ ‘ಗುರು’ವಿನ ಅನುಯಾಯಿ ನಾನಲ್ಲ ಎಂದು ಹೇಳುವ ಭೋಲೇ ಬಾಬಾ, ದೇವರೇ ನನಗೆ ಬೋಧನೆ ಮಾಡಿರುವಂಥದ್ದು ಎಂದು ಪ್ರತಿಪಾದಿಸುತ್ತಾ ಬಂದವರು. ಜನಪ್ರಿಯತೆ ಇದ್ದರೂ ಅವರು ಸೋಷಿಯಲ್ ಮೀಡಿಯಾ ಖಾತೆಗಳನ್ನು ಹೊಂದಿಲ್ಲ. ಅವರ ವೈಯಕ್ತಿಕ ವಿವರಗಳು ಎಲ್ಲೂ ಬಹಿರಂಗವಾಗಿಲ್ಲ.

ಕರೋನಾ ಸಮಯದಲ್ಲಿ ಭೋಲೆ ಬಾಬಾ ಅವರ ಸತ್ಸಂಗ ಕಾರ್ಯಕ್ರಮವು ವಿವಾದಕ್ಕೆ ಒಳಗಾಗಿತ್ತು. ಆಗ ಅವರು ತಮ್ಮ ಸತ್ಸಂಗದಲ್ಲಿ ಕೇವಲ 50 ಮಂದಿಗೆ ಮಾತ್ರ ಅನುಮತಿ ಕೋರಿದ್ದರು. ಆದರೆ, ಬರ ಬರುತ್ತಾ ಅವರ ಸತ್ಸಂಗಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಸೇರುತ್ತಿದ್ದರು. ಭೋಲೆ ಬಾಬಾ ಇಟಾಹ್, ಆಗ್ರಾ, ಮೈನ್‍ಪುರಿ, ಷಹಜಹಾನ್‍ಪುರ, ಹತ್ರಾಸ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿಯೂ ಹೆಸರು ವಾಸಿಯಾಗಿದ್ದಾರೆ. ಇದಲ್ಲದೇ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾಣಕ್ಕೆ ಹೊಂದಿಕೊಂಡಿರುವ ಹಲವು ಜಿಲ್ಲೆಗಳಲ್ಲಿ ಅವರು ಪ್ರವಚನ ನೀಡುತ್ತಾರೆ.

ಭೋಲೆ ಬಾಬಾ ಅವರ ಸತ್ಸಂಗಕ್ಕೆ ಹೋಗುವ ಭಕ್ತರಿಗೆ ನೀರು ವಿತರಿಸಲಾಗುತ್ತದೆ. ಈ ನೀರು ಕುಡಿಯುವುದರಿಂದ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಬಾಬಾ ಅವರ ಅನುಯಾಯಿಗಳು ನಂಬುತ್ತಾರೆ. ಪಟಿಯಾಲದ ಬಹದ್ದೂರ್ ನಗರ ಗ್ರಾಮದಲ್ಲಿರುವ ಆಶ್ರಮದಲ್ಲಿ ಬಾಬಾ ದರ್ಬಾರ್ ನಡೆಸುತ್ತಿದ್ದಾರೆ. ಆಶ್ರಮದ ಹೊರಗೆ ಹ್ಯಾಂಡ್ ಪಂಪ್ ಕೂಡ ಇದೆ. ದರ್ಬಾರ್ ಸಮಯದಲ್ಲಿ, ಈ ಹ್ಯಾಂಡ್ ಪಂಪ್ ನಿಂದ ನೀರು ಕುಡಿಯಲು ಉದ್ದನೆಯ ಸರತಿ ಸಾಲು ಇರುತ್ತದೆ.

 

ಹಾಗಾದ್ರೆ ಸತ್ಸಂಗ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಲು ಕಾರಣವೇನು ಅನ್ನೋದನ್ನ ನೋಡೋದಾದ್ರೆ.. ಸತ್ಸಂಗ ಕಾರ್ಯಕ್ರಮ ಮುಗಿದ ನಂತರ ಭೋಲೆ ಬಾಬಾ ಅವರು ಹಾದು ಹೋಗುವ ಮಾರ್ಗದಿಂದ ಧೂಳು ಸಂಗ್ರಹಿಸಲು ಜನರು ಮುಗಿಬಿದ್ದಿದ್ದರು. ಆಗ ಕಾಲ್ತುಳಿತ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸತ್ಸಂಗದಲ್ಲಿ ಭಕ್ತಿ ಪರಾಕಾಷ್ಠೆ ತಲುಪಿದಾಗ ಉಂಟಾದ ದುರದೃಷ್ಟಕರ ಪರಿಣಾಮ ಇದು ಎಂದು ವಿಶ್ಲೇಷಿಸಲಾಗುತ್ತಿದೆ.
ಕುತೂಹಲದ ಸಂಗತಿ ಎಂದರೆ, ಈ ಕಾರ್ಯಕ್ರಮ ನಡೆಸಲು ಸಂಘಟಕರು 5,000 ಜನರ ಭಾಗವಹಿಸುವಿಕೆಗೆ ಅನುಮತಿ ಪಡೆದಿದ್ದರು. ಅಷ್ಟೇ ಜನರಿಗೆ ಆಗುವಂತೆ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಆದರೆ, ಸ್ಥಳದಲ್ಲಿ ಒಂದೂವರೆ ಲಕ್ಷದಷ್ಟು ಜನರು ಸೇರಿದ್ದರು ಎನ್ನಲಾಗಿದೆ.

About The Author