Tuesday, April 29, 2025

Latest Posts

Lalu Prasad : ಮೋದಿ ಸರ್ಕಾರ ಪತನ? : ಲಾಲು ಪ್ರಸಾದ್ ಯಾದವ್ ಭವಿಷ್ಯ

- Advertisement -

ಲೋಕಸಭಾ ಚುನಾವಣೆ ಮುಗಿದು ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು 1 ತಿಂಗಳು ಕೂಡ ಕಳೆದಿಲ್ಲ, ಆಗಲೇ ಸರ್ಕಾರ ಬೀಳುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆಗಸ್ಟ್‌ ವೇಳೆಗೆ ಪತನವಾಗಬಹುದು ಮತ್ತು ಯಾವುದೇ ಸಮಯದಲ್ಲಿ ಚುನಾವಣೆ ನಡೆಯಬಹುದು ಎಂದು ಇಂಡಿಯಾ ಮೈತ್ರಿಕೂಟದ ನಾಯಕರೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಪಡೆದುಕೊಂಡಿತು. ಆದರೆ ಬಹುಮತದ 272 ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಯಿತು. ಬಿಜೆಪಿ ತನ್ನ ಮಿತ್ರ ಪಕ್ಷಗಳಾದ ಜೆಡಿಯು, ಟಿಡಿಪಿ ಸೇರಿದಂತೆ ಹಲವು ಪಕ್ಷಗಳ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿದೆ. ಮೋದಿಯವರು ಸತತ ಮೂರನೇ ಭಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗಿನಿಂದ, ಹಲವಾರು ವಿರೋಧ ಪಕ್ಷದ ನಾಯಕರು ಈ ಸರ್ಕಾರವು ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ಕೆಲವೇ ತಿಂಗಳುಗಳಲ್ಲಿ ಬೀಳುತ್ತದೆ ಎಂಬ ಭವಿಷ್ಯ ನುಡಿಯುತ್ತಿದ್ದಾರೆ. ಇದೀಗ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕೂಡ ಸರ್ಕಾರ ಪತನದ ಕುರಿತು ಹೇಳಿಕೆ ನೀಡಿದ್ದಾರೆ.

ಎಲ್ಲ ಪಕ್ಷದ ಕಾರ್ಯಕರ್ತರಿಗೆ ನಾನು ಸಿದ್ಧರಾಗಿರಲು ಮನವಿ ಮಾಡುತ್ತೇನೆ. ಏಕೆಂದರೆ ಯಾವುದೇ ಸಮಯದಲ್ಲಿ ಚುನಾವಣೆಗಳು ನಡೆಯಬಹುದು. ದೆಹಲಿಯಲ್ಲಿ ಮೋದಿ ಸರ್ಕಾರವು ತುಂಬಾ ದುರ್ಬಲವಾಗಿದೆ ಮತ್ತು ಆಗಸ್ಟ್ ವೇಳೆಗೆ ಅದು ಬೀಳಬಹುದು ಎಂದು ಮಾಜಿ ಕೇಂದ್ರ ಸಚಿವ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಿಳಿಸಿದ್ದಾರೆ.

ಬಿಹಾರದ ಜೆಡಿಯು ಹಾಗೂ ಬಿಜೆಪಿ ಮೈತ್ರಿ ಕುರಿತು ಲಾಲು ಅವರ ಪುತ್ರ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಜನತಾ ದಳದಿಂದ ಬಂದವರು ಅಧಿಕಾರದ ದುರಾಸೆಯಿಂದ ತಮ್ಮ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿಯ ಮುಂದೆ ರಾಜಿ ಮಾಡಿಕೊಳ್ಳದ ಅಥವಾ ಮಂಡಿಯೂರದ ಏಕೈಕ ಪಕ್ಷ ರಾಷ್ಟ್ರೀಯ ಜನತಾ ದಳ. ಅಧಿಕಾರದಲ್ಲಿರುವುದು ದೊಡ್ಡ ವಿಷಯವಲ್ಲ, ನಮ್ಮ ಹೋರಾಟ ದುರ್ಬಲ ಮತ್ತು ವಂಚಿತರಿಗಾಗಿ ಇರುತ್ತೆ ಎಂದು ತೇಜಸ್ವಿ ಯಾದವ್ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

- Advertisement -

Latest Posts

Don't Miss