ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀಯೂ ಒಂದಾಗಿದೆ. ಪ್ರತಿ ತಿಂಗಳು 2000 ರೂಪಾಯಿ ಹಣವನ್ನು ಪ್ರತಿ ಕಟುಂಬದ ಯಜಮಾನಿಯರ ಖಾತೆಗೆ ಜಮೆ ಮಾಡಲಾಗುತ್ತದೆ. ಗೃಹ ಲಕ್ಷ್ಮೀ ಸೇರಿದಂತೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎನ್ನುವ ವದಂತಿಯನ್ನು ಸರ್ಕಾರ ತಳ್ಳಿಹಾಕಿದೆ. ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇತ್ತೀಚಿಗೆ ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆ ನಿಲ್ಲುವುದಿಲ್ಲ. ಐದು ವರ್ಷಗಳವರೆಗೂ ಇದು ಮುಂದುವರಿಯಲಿದೆ. ಬಿಜೆಪಿಯವರು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಕರ್ನಾಟಕ ರಾಜ್ಯದ ಪ್ರತೀ ಕುಟುಂಬದ ಯಜಮಾನಿಯರಿಗಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಪ್ರಯೋಜನವನ್ನು ಕಳೆದ 11 ತಿಂಗಳಿನಿಂದಲೂ ಕೋಟ್ಯಾಂತರ ಮಹಿಳೆಯರು ಪಡೆಯುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪ್ರತೀ ತಿಂಗಳ ಮೊದಲ ವಾರದಲ್ಲಿಯೇ ಜಮೆ ಮಾಡುವುದಾಗಿ ರಾಜ್ಯ ಸರಕಾರ ಹೇಳಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಣ ಬ್ಯಾಂಕ್ ಖಾತೆಗಳಿಗೆ ಸಂದಾಯವಾಗುವುದು ವಿಳಂಭವಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆದ ಕೂಡಲೇ ಯೋಜನೆಯ ಫಲಾನುಭವಿಗಳ ಮೊಬೈಲ್‌ಗೆ ಮೆಸೇಜ್ ಬರುತ್ತದೆ. ಆದರೆ ಕೆಲವೊಮ್ಮೆ ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಮೇಸೆಜ್ ಬಾರದೇ ಇರಬಹುದು. ಅಂತಹ ಸಂದರ್ಭದಲ್ಲಿ ಬ್ಯಾಂಕ್ ಶಾಖೆಗಳಿಗೆ ಅರ್ಜಿದಾರರು ಅಲೆಯೋದು ಸರ್ವೆ ಸಾಮಾನ್ಯ. ಆದ್ರೆ ಇನ್ಮುಂದೆ ಈ ಸಮಸ್ಯೆ ನಿಮಗೆ ಇರೋದಿಲ್ಲ.
ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆ ಆಗಿದೆಯಾ? ಇಲ್ಲವಾ ಅನ್ನೋದನ್ನು ಚೆಕ್ ಮಾಡೋದು ತಲೆನೋವಾಗಿ ಪರಿಣಮಿಸಿದ್ರೆ, ಇನ್ಮುಂದೆ ನೀವು ಆ ಚಿಂತೆಯನ್ನು ಬಿಟ್ಟು ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದಾಗಿದೆ. ಇ-ಆಡಳಿತ ಇಲಾಖೆ ಡಿಬಿಟಿ ಕರ್ನಾಟಕ ಅನ್ನೋ ಮೊಬೈಲ್ ಅಪ್ಲಿಕೇಶನ್ ಸಿದ್ದಪಡಿಸಿದ್ದು, ಈ ಆ್ಯಪ್ ಬಳಸುವ ಮೂಲಕ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಸ್ಟೇಟಸ್ ನೀವು ತಿಳಿದುಕೊಳ್ಳಬಹುದಾಗಿದೆ.
ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿದ್ಯಾ ಅನ್ನೋದನ್ನ ಹೀಗೆ ಚೆಕ್ ಮಾಡಿ:
* ಕರ್ನಾಟಕ ಸರಕಾರದ ಇ-ಆಡಳಿತ ಇಲಾಖೆಯ ʻDBT Karnatakaʼ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
* ನಂತರ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು, ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ 6 ಅಂಕಿಯ ಓಟಪಿ ಬರಲಿದ್ದು, ಅದನ್ನು ನಮೂದಿಸಿ.
* ನಂತರದಲ್ಲಿ ನಿಮಗೆ ಅನುಕೂಲವಾಗುವಂತಹ 4 ಅಂಕಿಯ ಪಾಸ್ವರ್ಡ್ ರಚಿಸಿಕೊಳ್ಳಿ.
* ಕೊನೆಯ ಕಾಲಂನಲ್ಲಿ ತೋರಿಸುವ ಬಟನ್ ಮೇಲೆ “ಸರಿ” ಎಂದು ಕ್ಲಿಕ್ ಮಾಡಿ.
ನೀವು ಆ್ಯಪ್ ಲಾಗಿನ್ ಮಾಡಿದ ನಂತರ ನಿಮ್ಮ ಅರ್ಜಿಯ ಸ್ಥಿತಿ ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ “ಗೃಹಲಕ್ಷ್ಮಿ” ಯೋಜನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಗೃಹಲಕ್ಷ್ಮೀ ಯೋಜನೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರ, ಮೊಬೈಲ್ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿ ಲಭ್ಯವಾಗಿದೆ.