Sunday, December 22, 2024

Latest Posts

ಕನ್ನಡಿಗರಿಗೆ ಸೆಪ್ಟೆಂಬರ್‌ ಸ್ಪೆಷಲ್‌- ಚಿತ್ರಮಂದಿರಕ್ಕೆ ಸ್ಟಾರ್ಸ್‌ ಸಿನಿಮಾಗಳ ಲಗ್ಗೆ

- Advertisement -

ಪ್ರಸ್ತುತ ಕನ್ನಡ ಚಿತ್ರರಂಗದ ಸ್ಥಿತಿ ಇದೀಗ ಅಧೋಗತಿಯಲ್ಲಿದೆ! ಹೌದು, ಕಳೆದೆರೆಡು ವರ್ಷಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದರೆ ಯಾವೊಂದು ಸಿನಿಮಾ ಕೂಡ ಗಾಂಧಿನಗರದಲ್ಲಿ ಜೋರು ಸದ್ದು ಮಾಡಿಲ್ಲ. ಥಿಯೇಟರಲ್ಲಿ ರಿಲೀಸ್‌ ಆಗುವ ಯಾವ ಸಿನಿಮಾ ಕೂಡ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಅಷ್ಟೇ ಅಲ್ಲ, ಸಿನಿಮಾ ಮಂದಿರದತ್ತ ಪ್ರೇಕ್ಷಕ ಕೂಡ ಇಣುಕು ಹಾಕುತ್ತಿಲ್ಲ. ಇದಕ್ಕೆ ಕಾರಣ ಹಲವು… ಇಲ್ಲಿ ಸ್ಟಾರ್‌ ಸಿನಿಮಾಗಳು ಬರುತ್ತಿಲ್ಲ ಎಂಬ ಕೂಗು ಒಂದಡೆಯಾದರೆ, ಪ್ರೇಕ್ಷಕ ಹಣ ಕೊಟ್ಟು ಎರಡು ತಾಸು ಕೂತು ನೋಡುವ ಸಿನಿಮಾ ನೋಡಿಸಿಕೊಂಡು ಹೋಗುವಲ್ಲಿ ವಿಫಲವಾಗುತ್ತಿವೆ ಎಂಬ ಆರೋಪ ಮತ್ತೊಂದೆಡೆ. ಇಷ್ಟಾಗಿಯೂ, ಪ್ರೇಕ್ಷಕನ ಆಯ್ಕೆ ಏನು? ಎಂಬ ಪ್ರಶ್ನೆ ಸದ್ಯಕ್ಕೆ ಗಿರಕಿಹೊಡೆಯುತ್ತಿದೆ.

ಸ್ಟಾರ್‌ ಸಿನಿಮಾಗಳನ್ನು ಎದುರು ನೋಡುತ್ತಿರುವ ಪ್ರೇಕ್ಷಕನಿಗೆ ಇಲ್ಲೊಂದು ಗುಡ್‌ ನ್ಯೂಸ್‌ ಇದೆ. ಇದು ಸ್ಟಾರ್ಸ್‌ ಫ್ಯಾನ್ಸ್‌ಗೂ ಖುಷಿಯ ಸುದ್ದಿಯೇ. ಹೌದು, ಸೆಪ್ಟೆಂಬರ್‌ ಅಂಥದ್ದೊಂದು ಖುಷಿಗೆ ಕಾರಣವಾಗೋದು ದಟ್ಟವಾಗಿದೆ. ಎಲ್ಲವೂ ಅಂದುಕೊಂಡಂತೆ ಸರಿಯಾಗಿ ನಡೆದರೆ, ಸೆಪ್ಟೆಂಬರ್‌ನಲ್ಲಿ “ಭೈರತಿ ರಣಗಲ್”‌, “ಯುಐ” ಮತ್ತು “ಮ್ಯಾಕ್ಸ್‌” ತೆರೆಗೆ ಅಪ್ಪಳಿಸುವ ಸಾಧ್ಯತೆ ಇದೆ. ಶಿವರಾಜಕುಮಾರ್‌ ಅಭಿನಯದ “ಭೈರತಿ ರಣಗಲ್”‌ ಮತ್ತು ಉಪೇಂದ್ರ ನಟನೆಯ “ಯು ಐ” ಇನ್ನೇನು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸುವಲ್ಲಿ ನಿರತವಾಗಿವೆ. ಎಲ್ಲವೂ ಬಹುಬೇಗ ನಡೆದರೆ, ಸೆಪ್ಟೆಂಬರ್‌ ಹೊತ್ತಿಗೆ ಈ ಸಿನಿಮಾಗಳು ಥಿಯೇಟರ್‌ಗೆ ಬರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಅಲ್ಲಿಗೆ ಸೆಪ್ಟೆಂಬರ್‌ ಸ್ಟಾರ್‌ ಸ್ಪೆಷಲ್‌ ಮಂತ್‌ ಅಂದರೆ ತಪ್ಪಿಲ್ಲ ಬಿಡಿ. ಈ ವಿಷಯ ಈ ಸ್ಟಾರ್ಸ್‌ ಫ್ಯಾನ್ಸ್‌ಗಂತೂ ಸಖತ್‌ ಖುಷಿಯನ್ನಂತೂ ಕೊಡುತ್ತೆ ಅನ್ನುವುದರಲ್ಲಿ ಸಂದೇಹವಿಲ್ಲ. ಯಾಕೆಂದರೆ, ಒಂದೇ ತಿಂಗಳಲ್ಲಿ ಇಬ್ಬರು ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಥಿಯೇಟರ್‌ಗೆ ಬರುತ್ತವೆ ಅನ್ನೋದೇ ದೊಡ್ಡ ಸುದ್ದಿ. ಈ ಕಾರಣಕ್ಕೆ ಈಗ ಗಾಂಧಿನಗರ ಕೂಡ ಗರಿಗೆದರಿ ನಿಲ್ಲುವಂತಾಗಿದೆ.

ಉಪೇಂದ್ರ ಹಾಗು ಶಿವರಾಜಕುಮಾರ್‌ ಸಿನಿಮಾಗಳು ತೆರೆಗೆ ಬರಲು ಸಜ್ಜಾಗುತ್ತಿವೆಯಾದರೂ, ಸೆಪ್ಟೆಂಬರ್‌ನಲ್ಲಿ ಏಕಕಾಲಕ್ಕೆ ರಿಲೀಸ್‌ ಆಗುವುದು ಬೇಡ ಎಂಬ ಮಾತು ಕೂಡ ಅಭಿಮಾನಿಗಳ ವಲಯದಲ್ಲಿ ಕೇಳಿಬರುತ್ತಿದೆ. ಸೆಪ್ಟೆಂಬರ್‌ 18ರಂದು ಉಪೇಂದ್ರ ಅವರ ಹುಟ್ಟು ಹಬ್ಬ. ಹಾಗಾಗಿ ಎರಡನೇ ವಾರಕ್ಕೆ ಈ ಸಿನಿಮಾ ಬಂದರೂ ಅಚ್ಚರಿಯಿಲ್ಲ. ಇನ್ನು, ಸೆಪ್ಟೆಂಬರ್‌ ಮೊದಲ ವಾರದಲ್ಲಿ ಶಿವರಾಜಕುಮಾರ್‌ ಅವರ ಭೈರತಿ ರಣಗಲ್‌ ಸಿನಿಮಾ ಬಿಡುಗಡೆಯಾದರೆ, ಹದಿನೈದು ದಿನಗಳ ಅಂತರದಲ್ಲಿ ಸಿನಿಮಾ ರಿಲೀಸ್‌ ಆದಂತಾಗುತ್ತೆ. ಹಾಗಾಗಿ ಎರಡೂ ಚಿತ್ರಗಳಿಗೂ ಒಂದಷ್ಟು ಗ್ಯಾಪ್‌ ಕೊಡಬೇಕು ಎಂಬ ಅಭಿಮಾನಿಗಳ ಮಾತಿಗೆ ಚಿತ್ರತಂಡಗಳು ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನುವುದನ್ನು ಕಾದು ನೋಡಬೇಕು. ಸದ್ಯ ಈ ಎರಡು ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆಗಳಂತೂ ಇವೆ. ಒಂದೊಳ್ಳೆಯ ಸಿನಿಮಾಗಾಗಿ ಹಪಹಪಿಸುತ್ತಿದ್ದ ಕನ್ನಡ ಪ್ರೇಕ್ಷಕ ಪ್ರೀತಿಯಿಂದಲೇ ಈ ಸಿನಿಮಾಗಳನ್ನು ಅಪ್ಪಿಕೊಳ್ತಾನೆ ಎಂಬ ನಂಬಿಕೆ ಚಿತ್ರತಂಡಕ್ಕೂ ಇದೆ. ಹಾಗೆಯೆ ಈ ಸಿನಿಮಾಗಳು ಬಾಕ್ಸಾಪೀಸ್‌ ನಲ್ಲಿ ದೊಡ್ಡ ಕಮಾಯಿ ಮಾಡುತ್ತೆ ಎಂಬುದರಲ್ಲಿ ಎರಡು ಮಾತಿಲ್ಲ ಬಿಡಿ.

ಭೈರತಿ ರಣಗಲ್‌ ಇದು‌ ಶಿವಣ್ಣ ಅವರ ಬಹು ನಿರೀಕ್ಷೆಯ ಚಿತ್ರ. ಈ ಹಿಂದೆ “ಮಫ್ತಿ” ನಿರ್ದೇಶಿಸಿದ್ದ ನರ್ತನ್, ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಅಷ್ಟೇ ಅಲ್ಲ, ಇದು ಮಫ್ತಿಯ ಪ್ರೀಕ್ವೆಲ್‌ ಚಿತ್ರ. ಮಫ್ತಿ ಭರ್ಜರಿ ಸೌಂಡು ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಈಗ ಭೈರತಿ ರಣಗಲ್‌ ಬೇರೆಯದ್ದೇ ಹವಾ ಸೃಷ್ಟಿಸಿದೆ. ಅಂದಹಾಗೆ, ಈ ಸಿನಿಮಾ ಆಗಸ್ಟ್‌ 15 ರಂದು ತೆರೆಗೆ ಬರಲಿದೆ ಎಂಬ ಸುದ್ದಿ ಇತ್ತು. ಆದರೆ, ಇತ್ತೀಚೆಗೆ ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ಹೊರಬಂದ ಟೀಸರ್‌ ನಲ್ಲಿ ಸೆಪ್ಟೆಂಬರ್‌ಗೆ ಈ ಚಿತ್ರ ಬರಲಿದೆ ಎಂಬುದಾಗಿ ಹೇಳಲಾಗಿದೆ. ಇನ್ನು, ಈ ಚಿತ್ರ ಗೀತಾ ಶಿವರಾಜಕುಮಾರ್‌ ನಿರ್ಮಾಣ ಮಾಡಿದ್ದಾರೆ. ಬಹುದೊಡ್ಡ ತಾರಾಬಳಗದ ಜೊತೆ, ಒಂದೊಳ್ಳೆಯ ಟೆಕ್ನೀಷಿಯನ್ಸ್‌ ಕೂಡ ಇಲ್ಲಿ ಕೆಲಸ ಮಾಡಿದ್ದಾರೆ.

ಇನ್ನು,ಉಪೇಂದ್ರ ಅಭಿನಯದ ಯುಐ ಸಿನಿಮಾವನ್ನು ಸೆಪ್ಟೆಂಬರ್‌ನಲ್ಲೇ ರಿಲೀಸ್‌ ಮಾಡುವ ಯೋಚನೆ ಚಿತ್ರತಂಡಕ್ಕಿದೆಯಂತೆ. ಅಂದಹಾಗೆ, ಈ ಸಿನಿಮಾವನ್ನು ಸೆಪ್ಟೆಂಬರ್‌ 9 ರಂದು ತೆರೆಗೆ ತರುವ ಪ್ಲಾನ್‌ ಕೂಡ ಮಾಡಲಾಗಿದೆ. ಹಾಗೆ ನೋಡಿದರೆ, ಸೆಪ್ಟೆಂಬರ್‌ ಉಪೇಂದ್ರ ಅವರಿಗೆ ಲಕ್ಕಿ ಮಂತ್.‌ ಸೋ, ಅದೇ ತಿಂಗಳಲ್ಲಿ ರಿಲೀಸ್‌ ಮಾಡುವ ಜೋರು ತಯಾರಿ ನಡೆದಿದೆ ಎಂಬುದು ಈ ಹೊತ್ತಿನ ಸುದ್ದಿ.

ಇನ್ನು, ಎಲ್ಲವೂ ಅಂದುಕೊಂಡಂತೆ ನಡೆದರೆ, ಸುದೀಪ್‌ ಅವರ ಮ್ಯಾಕ್ಸ್‌ ಕೂಡ ಸೆಪ್ಟೆಂಬರ್‌ನಲ್ಲೇ ತೆರೆಗೆ ಬರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಯಾಕೆಂದರೆ, ಈಗಷ್ಟೇ ಮ್ಯಾಕ್ಸ್‌ ಟೀಸರ್‌ ರಿಲೀಸ್‌ ಆಗಿದೆ. ಭರ್ಜರಿ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಈಗಾಗಲೇ ಮುಗಿಯುವ ಹಂತ ತಲುಪಿದೆ. ಸುದೀಪ್‌ ಅವರ ಹುಟ್ಟು ಹಬ್ಬ ಕೂಡ ಸೆಪ್ಟೆಂಬರ್‌ನಲ್ಲಿ ಇರುವುದರಿಂದ ಈ ಚಿತ್ರ ಬರಬಹುದು ಎನ್ನಲಾಗುತ್ತಿದೆ. ಅದೇನೆ ಇರಲಿ, ಒಟ್ಟಾರೆ, ಸಿನಿಮಾಗಳ ಬರ ಅನ್ನುತ್ತಿದ್ದ ಪ್ರೇಕ್ಷಕನಿಗೆ ಸೆಪ್ಟೆಂಬರ್‌ ಸ್ಪೆಷಲ್‌ ಮಂತ್‌ ಆಗುವಂತಾಗಲಿ ಅನ್ನೋದೇ ಆಶಯ.

ವಿಜಯ್‌ ಭರಮಸಾಗರ
ಎಂಟರ್‌ಟೈನ್‌ಮೆಂಟ್‌ ಬ್ಯೂರೋ

- Advertisement -

Latest Posts

Don't Miss