News: ಫೋನ್‌ಪೇ ಸಿಇಓ ಸುಮೀರ್ ನಿಗಮ್, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬ ವಿಷಯದ ಬಗ್ಗೆ ಮಾತನಾಡಿ, ಕನ್ನಡಿಗರ ಸ್ವಾಭಿಮಾನವನ್ನು ಟೀಕೆ ಮಾಡಿದ್ದರು.
ಹಾಗಾಗಿ ಕನ್ನಡಿಗರು ಫೋನ್‌ಪೇ ಆ್ಯಪ್ ಡಿಲೀಟ್ ಮಾಡಿ, ಅಭಿಯಾನ ಮಾಡಿದ್ದರು. ಹೀಗಾಗಿ ನಷ್ಟ ಅನುಭವಿಸಿದ ಫೋನ್‌ಪೇ, ಇದೀಗ ಸರಿ ದಾರಿಗೆ ಬಂದಿದ್ದು, ಸಮೀರ್ ನಿಗಮ್ ಕನ್ನಡಿಗರಲ್ಲಿ ಬೇಷರತ್ ಕ್ಷಮೆ ಕೇಳಿದ್ದಾರೆ.
ನನಗೆ ಈಗ 46 ವರ್ಷ. 15 ವರ್ಷಕ್ಕೂ ಹೆಚ್ಚು ಯಾವ ರಾಜ್ಯದಲ್ಲೂ ಉಳಿದವನಲ್ಲ ನಾನು. ನನ್ನ ತಂದೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರನ್ನು ದೇಶದಾದ್ಯಂತ ಕೆಲಸದಲ್ಲಿ ನಿಯೋಜನೆ ಮಾಡುತ್ತಿದ್ದರು. ಅಂಥವರ ಮಕ್ಕಳು ಕರ್ನಾಟಕದಲ್ಲಿ ಕೆಲಸ ಮಾಡಲು ಅರ್ಹರಲ್ಲವೇ..? ನಾನು ಒಂದು ಸಂಸ್ಥೆಯನ್ನು ಕಟ್ಟಿದ್ದೇನೆ. ದೇಶಾದ್ಯಂತ 25 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇನೆ. ನನ್ನ ಮಕ್ಕಳು ಅವರ ತವರುನಗರದಲ್ಲಿ ಕೆಲಸ ಮಾಡಲು ಅರ್ಹರಲ್ಲವೇ..? ನಾಚಿಕೆಗೇಡು. ಎಂದು ನಿಗಮ್ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ವಿರುದ್ಧ ಅಭಿಯಾನ ಶುರುವಾಗಿದ್ದು, ಕೊನೆಗೂ ನಿಗಮ್ ಕ್ಷಮೆಯಾಚಿಸಿದ್ದಾರೆ. ಕನ್ನಡಿಗರನ್ನು ಅವಮಾನಿಸಬೇಕು ಅನ್ನುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ, ಕ್ಷಮೆ ಕೇಳುತ್ತೇನೆ. ಕನ್ನಡ ಸೇರಿ ಭಾರತದ ಎಲ್ಲ ಭಾಷೆಗಳ ಮೇಲೆ ನನಗೆ ಗೌರವವಿದೆ. ಫೋನ್ ಪೇ ಹುಟ್ಟಿದ್ದೇ ಬೆಂಗಳೂರಿನಲ್ಲಿ. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಅತ್ಯುತ್ತಮವಾಗಿದೆ ಎಂದು ನಿಗಮ್ ಬೆಂಗಳೂರನ್ನು ಹಾಡಿಹೊಗಳಿದ್ದಾರೆ.