Tumakuru News: ತುಮಕೂರು: ಕುರಿಗಾಹಿಯೋರ್ವ ಕುರಿಗಳ ರಕ್ಷಣೆಗೆ ಹೋಗಿ, ಪ್ರಾಣ್ಕಕೆ ಕುತ್ತು ತಂದುಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ತಾಲ್ಲೂಕಿನ ಹಿರೇಹಳ್ಳಿ ಬಳಿಯ ಮಂದಾರಗಿರಿ ಬೆಟ್ಟದ ಪಕ್ಕದಲ್ಲಿ ಈ ಘಟನೆ ನಡೆದಿದೆ. ಕುರಿಗಾಹಿ ಮಂದಾರಗಿರಿ ಬೆಟ್ಟದ ಮೇಲೆ ಕುರಿ ಮೇಯಿಸಲು ತೆರಳಿದ್ದ. ಈ ವೇಳೆ ರಸ್ತೆಗೆ ಹಾಕುವ ಡಾಂಬರು ಸುರಿದಿದ್ದ ಗುಂಡಿಗೆ ಕುರಿಗಳು ಬಿದ್ದಿದೆ. ಆ ಕುರಿಗಳನ್ನು ರಕ್ಷಿಸಲು ಹೋಗಿ, ಕುರಿಗಾಹಿ ಕೂಡ ಡಾಂಬರ್ ಗುಂಡಿಗೆ ಬಿದ್ದಿದ್ದಾನೆ.
ಸುಮಾರು ಎರಡು ಗಂಟೆಗಳ ಕಾಲ ಡಾಂಬರ್ ಗುಂಡಿಯಲ್ಲೇ ಕುರಿಗಾಹಿ ಬಿದ್ದಿದ್ದು, ಅದೇ ಸಮಯಕ್ಕೆ ಎನ್‌ಸಿಸಿ ಬೆಟಾಲಿಯನ್ ಕ್ಯಾಂಪ್ ಟೀಂನ ಸಮಯ ಪ್ರಜ್ಞೆಯಿಂದ ಕುರಿಗಾಹಿ ಬದುಕುಳಿದಿದ್ದಾನೆ. ಸುಮಾರು ಏಳೆಂಟು ಕುರಿಗಳು ಮತ್ತು ಕುರಿಾಗಾಹಿಯನ್ನು ಡಾಂಬರ್ ಗುಂಡಿಯಿಂದ ಹೊರ ತೆಗೆದಿದ್ದು, ರಕ್ಷಣೆ ಮಾಡಲಾಗಿದೆ.
ಎನ್ ಸಿಸಿ ಕ್ಯಾಂಪ್ ತರಬೇತಿಯಲ್ಲಿದ್ದ ಬಿಹೆಚ್.ಎಂ ತಿಲಕ್ ರಾಜ್, ಕೆಡೆಟ್ ಮಹೇಶ್, ಜುಬೇದ್. ಮನೋಜ್, ದರ್ಶನ್ ಎಂಬುವರು ರಕ್ಷಣೆ ಮಾಡಿದ್ದು, ಕುರಿಗಾಹಿ ಮತ್ತು 5 ಕುರಿ ಜೀವಂತವಾಗಿ ಸಿಕ್ಕಿದ್ದಾರೆ. ಕುರಿಗಾಹಿ ಸದ್‌ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.




