Saturday, November 9, 2024

Latest Posts

CHANNAPATNA BY ELECTION: ರಂಗೇರಿದ ಚನ್ನ‘ಪಟ್ಟ’ಣ ಅಖಾಡ: ಉಪ ಚುನಾವಣಾ ಕಣಕ್ಕೆ ನಿಖಿಲ್​ ಎಂಟ್ರಿ

- Advertisement -

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಟಿಕೆಟ್​ಗಾಗಿ ದೋಸ್ತಿಗಳ ನಡುವೆ ಭಾರಿ ಪೈಪೋಟಿಯೇ ನಡೀತಿದೆ.. ಒಂದ್ಕಡೆ ಮೈತ್ರಿ ಟಿಕೆಟ್​ಗೆ ಬಿಜೆಪಿಯ ಸಿ.ಪಿ.ಯೋಗೇಶ್ವರ್​ ಹಠಕ್ಕೆ ಬಿದ್ದು ಪಟ್ಟು ಹಿಡಿದಿದ್ರೆ, ಈ ಮಧ್ಯೆ, ಕೆಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಬೈ ಎಲೆಕ್ಷನ್​ ಅಖಾಡಕ್ಕೆ ಸದ್ದಿಲ್ಲದೆ ಎಂಟ್ರಿ ಕೊಟ್ಟಿದ್ದಾರೆ.

ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರ ಪ್ರವಾಸ ಕೈಗೊಂಡಿದ್ದು, ಎಲ್ಲೋ ಒಂದ್ಕಡೆ ಜೆಡಿಎಸ್​ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ.. ಮಾತ್ರವಲ್ಲದೆ ನಿಖಿಲ್​ ಕುಮಾರಸ್ವಾಮಿ ಅವರೇ ಚನ್ನಪಟ್ಟಣ ಉಪ ಚುನಾವಣೆಯ ಮೈತ್ರಿ ಅಭ್ಯರ್ಥಿ ಎಂಬ ಜಪ ಕೂಡ ಶುರುವಾಗಿದೆ.

2024ರ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ವಾರಸುದಾರ ಯಾರು ಎಂಬ ಪ್ರಶ್ನೆ ಮೂಡಿತ್ತು. ಈ ಎಲ್ಲಾ ಪ್ರಶ್ನೆಗಳಿಗೂ ಇದೀಗ ಉತ್ತರಗಳು ಸಿಗುತ್ತಿವೆ. ಜೆಡಿಎಸ್​ ವಲಯದಲ್ಲಿ ಕೇಳಿ
ಬಂದ ಮೊದಲ ಹೆಸರು ನಿಖಿಲ್ ಕುಮಾರಸ್ವಾಮಿ ಅವರದ್ದಾಗಿದ್ದರೆ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್‌ ಹೆಸರು ನಿರಂತರವಾಗಿ ಕೇಳಿ ಬರುತ್ತಲೇ ಇದೆ. ಟಿಕೆಟ್​ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಕುಮಾರಸ್ವಾಮಿ ಇದೀಗ ಸದ್ದಿಲ್ಲದೆ ಪುತ್ರ ನಿಖಿಲ್ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ರಣತಂತ್ರ ಹೆಣೆಯುತ್ತಿದ್ದಾರೆ.

ಶತಾಯಗತಾಯ ಕ್ಷೇತ್ರದ ಟಿಕೆಟ್​ ಪಡೆಯಲು ಸಿ.ಪಿ.ಯೋಗೇಶ್ವರ್​ ಇನ್ನಿಲ್ಲದಂತೆ ಕಸರತ್ತು ನಡೆಸ್ತಿದ್ದಾರೆ. ಇದೀಗ ಒಂದೇ ಕಲ್ಲಿನಲ್ಲಿ ಎರಡೂ ಹಕ್ಕಿ ಹೊಡೆಯೋಕೆ ತಂತ್ರ ರೂಪಿಸಿರೋ ಎಚ್​ಡಿಕೆ ಪುತ್ರ ನಿಖಿಲ್ ಅವರನ್ನು ಕ್ಷೇತ್ರಕ್ಕೆ ಕಳುಹಿಸುವ ಮೂಲಕ ಯೋಗೇಶ್ವರ್​ಗೆ ತಿರುಗೇಟು ನೀಡಿದ್ದಾರೆ. ನಿಖಿಲ್​ ಅವರನ್ನ ರಂಗ ಪ್ರವೇಶ ಮಾಡಿಸುವ ಮೂಲಕ ಸಿಪಿವೈ ಬೆಂಬಲಿಗರ ಮುಂದೆ ಮಂಕಾಗಿದ್ದ ಜೆಡಿಎಸ್​ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡುವಂತೆ ಮಾಡಿದ್ದಾರೆ.

ಟಿಕೆಟ್​ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್​ನಲ್ಲಿ ನಡೆಯುತ್ತಿರೋ ಈ ಎಲ್ಲಾ ಬೆಳವಣಿಗೆಗಳು ಇದೀಗ ಸದ್ದಿಲ್ಲದೆ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಗುತ್ತಿದೆ. ಯೋಗೇಶ್ವರ್​ಗೆ ಮೈತ್ರಿ ಟಿಕೆಟ್​ ನೀಡಲು ಕುಮಾರಸ್ವಾಮಿ ಅವರಿಗೆ ಸುತಾರಾಂ ಇಷ್ಟವಿಲ್ಲ. ಯಾಕಂದ್ರೆ, ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್​ ಎರಡು ಬಾರಿ ಸೋತಿರುವುದು ಇದೇ ಕುಮಾರಸ್ವಾಮಿ ವಿರುದ್ಧ. ತಮ್ಮ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರವನ್ನು ತನ್ನ ಹಳೇ ಎದುರಾಳಿಗೆ ಬಿಟ್ಟು ಕೊಡುವ ಮನಸ್ಸು ಕುಮಾರಸ್ವಾಮಿ ಅವರಿಗಿಲ್ಲ. ಕ್ಷೇತ್ರದ ಟಿಕೆಟ್​ ವಿಚಾರವಾಗಿ ಎಚ್​ಡಿಕೆ ಹಾಗೂ ಸಿಪಿವೈ ನಡುವೆ ಕೋಲ್ಡ್​ ವಾರ್ ಶುರುವಾಗಿದ್ದು, ಮೊನ್ನೆ ನಡೆದ ಪಾದಯಾತ್ರೆ ಸಂದರ್ಭದಲ್ಲೂ ಈ ಮುನಿಸು ಸ್ಫೋಟಗೊಂಡಿತ್ತು.

ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ರಂಗ ಪ್ರವೇಶ ಮಾಡಿಸುವ ಮೂಲಕ ಪಂಚಾಯಿತಿ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಕ್ಷೇತ್ರದಲ್ಲಿ ಜೆಡಿಎಸ್​ ವರ್ಚಸನ್ನು ಹೆಚ್ಚಿಸಲು ತಂತ್ರಗಾರಿಕೆ ಮಾಡಿದ್ದಾರೆ. ನಾನೇ ಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂದು ಓಡಾಡುತ್ತಿದ್ದ ಸಿ.ಪಿ.ಯೋಗೇಶ್ವರ್​ ದೆಹಲಿ ಭೇಟಿ ಫಲಪ್ರದವಾಗಲಿಲ್ಲ. ಈ ಮಧ್ಯೆ ಮೊನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಯೋಗೇಶ್ವರ್​ ವೇದಿಕೆ ಹಂಚಿಕೊಂಡಿದ್ದು ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

- Advertisement -

Latest Posts

Don't Miss