ರಾಜಾಜಿನಗರದಲ್ಲಿ ರಘುವೀರ್ ಎಸ್. ಗೌಡ ಅವರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ: 754 ಮಂದಿ ಭಾಗಿ

Bengaluru: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಮಾಕ್ಷಿಪಾಳ್ಯ ವಾರ್ಡ್‌ನ ಕೆತ್‌ಮಾರನಹಳ್ಳಿಯಲ್ಲಿ ರಘುವೀರ್ ಎಸ್. ಗೌಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಹಿಳೆಯರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, 754 ಮಂದಿ ಶಿಬಿರದ ಪ್ರಯೋಜನ ಪಡೆದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನೇಶ್ ಗುಂಡೂರಾವ್ ಅವರು ರಘುವೀರ್ ಗೌಡ ಅವರ ಸಾಮಾಜಿಕ ಕಳಕಳಿಯನ್ನು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ದಿನೇಶ್ ಗುಂಡೂರಾವ್ ಅವರು, “ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಮೂಲಕ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ರಘುವೀರ್ ಎಸ್. ಗೌಡ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಸಾಮಾನ್ಯವಾಗಿ ಇಂತಹ ಶಿಬಿರಗಳಲ್ಲಿ ನಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ನಮಗಿರುವ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೇವೆ. ಆದರೆ ರಘುವೀರ್ ಗೌಡ ಅವರು ತಪಾಸಣೆಗೆ ಮಾತ್ರ ಸೀಮಿತವಾಗದೆ, ಶಿಬಿರದಲ್ಲಿ ಗುರುತಿಸಲಾದ ಆರೋಗ್ಯ ಸಮಸ್ಯೆಗಳಿಗೆ ಅಗತ್ಯವಿರುವವರಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನೂ ಒದಗಿಸುತ್ತಿದ್ದಾರೆ. ಇದು ಬಹಳ ಮೆಚ್ಚುಗೆಯ ವಿಚಾರ.” ಎಂದು ತಿಳಿಸಿದರು.

423 ಮಂದಿಗೆ ಉಚಿತ ಕನ್ನಡಕ, 35 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ

ಶಿಬಿರದಲ್ಲಿ ಕಣ್ಣಿನ ತಪಾಸಣೆಗೆ ವಿಶೇಷ ಆದ್ಯತೆ ನೀಡಲಾಗಿತ್ತು. ತಪಾಸಣೆಯ ನಂತರ 423 ಮಂದಿಗೆ ಉಚಿತ ಕನ್ನಡಕಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದ್ದು, ಶೀಘ್ರದಲ್ಲೇ ವಿತರಿಸಲಾಗುವುದು. ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿರುವ 35 ಮಂದಿಗೆ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಗಿದ್ದು, ಅವರ ಶಸ್ತ್ರಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿಯನ್ನು ರಘುವೀರ್ ಎಸ್. ಗೌಡ ಚಾರಿಟೇಬಲ್ ಟ್ರಸ್ಟ್ ವಹಿಸಿಕೊಂಡಿದೆ.

187 ಮಂದಿಗೆ ಸ್ತನ ಕ್ಯಾನ್ಸರ್ ತಪಾಸಣೆ

ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಸ್ತನ ಕ್ಯಾನ್ಸರ್ ತಪಾಸಣೆಯನ್ನು ಆಯೋಜಿಸಲಾಗಿತ್ತು. ಒಟ್ಟು 187 ಮಂದಿ ಈ ತಪಾಸಣೆಯಲ್ಲಿ ಭಾಗವಹಿಸಿದರು. ಆರಂಭಿಕ ಹಂತದಲ್ಲಿಯೇ ಆರೋಗ್ಯ ಸಮಸ್ಯೆಗಳನ್ನು ಗುರುತಿಸುವ ಮಹತ್ವದ ಬಗ್ಗೆ ವೈದ್ಯರು ಮಾಹಿತಿ ನೀಡಿದರು.

ಇದರೊಂದಿಗೆ ದಂತ ತಪಾಸಣೆ, ಹೃದಯ ಸಂಬಂಧಿತ ಪರೀಕ್ಷೆಗಳು, ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ತಜ್ಞ ವೈದ್ಯರ ಸಮಾಲೋಚನೆ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಘುವೀರ್ ಎಸ್. ಗೌಡ ಅವರು, “ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ಸುಲಭವಾಗಿ ದೊರೆಯಬೇಕು ಎನ್ನುವುದು ನಮ್ಮ ಆಶಯ. ಅನೇಕರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಅವು ಗಂಭೀರವಾದ ನಂತರ ಆಸ್ಪತ್ರೆಗೆ ಹೋಗುತ್ತಾರೆ. ವಿಶೇಷವಾಗಿ ನಮ್ಮ ತಾಯಂದಿರು, ಅಕ್ಕತಂಗಿಯರು ಹಾಗೂ ಹಿರಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ನಮ್ಮ ಉದ್ದೇಶ ಕೇವಲ ಆರೋಗ್ಯ ತಪಾಸಣೆ ನಡೆಸುವುದಲ್ಲ. ತಪಾಸಣೆಯಲ್ಲಿ ಸಮಸ್ಯೆ ಕಂಡುಬಂದವರಿಗೆ ಅಗತ್ಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವುದು ಕೂಡ ನಮ್ಮ ಜವಾಬ್ದಾರಿ. ರಾಜಾಜಿನಗರದ ಜನರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಮ್ಮ ಟ್ರಸ್ಟ್ ಸದಾ ಬದ್ಧವಾಗಿದೆ.” ಎಂದು ತಿಳಿಸಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಂತ ಹಂತವಾಗಿ ಆಯೋಜಿಸಲು ರಘುವೀರ್ ಎಸ್. ಗೌಡ ಚಾರಿಟೇಬಲ್ ಟ್ರಸ್ಟ್ ಉದ್ದೇಶಿಸಿದೆ. ಇದು ಆ ಸರಣಿಯ ಮೊದಲ ಆರೋಗ್ಯ ಶಿಬಿರವಾಗಿದೆ.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ತಜ್ಞ ವೈದ್ಯರು, ವಿವಿಧ ಆಸ್ಪತ್ರೆಗಳ ಸಿಬ್ಬಂದಿ, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

About The Author