Friday, September 20, 2024

Latest Posts

Sandalwood news: ನೂರು ದಿನ ಜೈಲು ದರ್ಶನ! ಇನ್ನೆಷ್ಟು ದಿನ ದಾಸನ ಸೆರೆವಾಸ?

- Advertisement -

Sandalwood News: ಯಶಸ್ವಿ ನೂರು ದಿನ… ಒಂದು ಕಾಲದಲ್ಲಿ ಸಿನಿಮಾಗಳು ಶತದಿನ ಪೂರೈಸಿದಾಗ ಹೇಳುವ ಮಾತು ಇದಾಗಿತ್ತು. ಆದರೆ, ಕಾಲ ಕ್ರಮೇಣ ನೂರು ದಿನ, ಐವತ್ತು ದಿನದ ಮಾತು ದೂರವಾಯ್ತು. ಹೇಳಹೊರಟಿರುವ ವಿಷಯವಿಷ್ಟೇ. ದರ್ಶನ್‌ ಅವರ ನೂರು ದಿನದ ಬಗ್ಗೆ! ದರ್ಶನ್‌ ಅವರ ನೂರು ದಿನವೇ? ಏನಾದರೂ ಅವರ ಸಿನಿಮಾವೊಂದು ರೀ ರಿಲೀಸ್‌ ಆಗಿ ನೂರು ದಿನ ಪೂರೈಸಿಬಿಡ್ತಾ ಅನ್ನೋ ಪ್ರಶ್ನೆ ಬಂದರೂ ಅಚ್ಚರಿ ಬೇಡ.

ದರ್ಶನ್‌ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿರೋದು ಗೊತ್ತೇ ಇದೆ. ಅವರು ಜೈಲಿಗೆ ಹೋಗಿ ಸೆಪ್ಟೆಂಬರ್‌ 18ಕ್ಕೆ ಬರೋಬ್ಬರಿ ನೂರು ದಿನವಾಗಿದೆ. ಹಾಗೆ ನೋಡಿದರೆ, ಸೆಪ್ಟೆಂಬರ್‌ 17ಕ್ಕೆ ಅವರ ನ್ಯಾಯಾಂಗ ಬಂಧನದ ಅವಧಿ ಮುಗಿಯಬೇಕಿತ್ತು. ಆದರೆ, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ ಎದುರು ಅವರನ್ನು ಹಾಜರುಪಡಿಸಿದಾಗ, ಎಲ್ಲಾ ಆರೋಪಿಗಳಿಗೂ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಲಾಯಿತು. ಜಡ್ಜ್‌ ಈ ಆದೇಶ ಹೊರಡಿಸಿದರು. ಅಲ್ಲಿಗೆ ದರ್ಶನ್‌ ಇಂದು ಯಶಸ್ವಿ 100 ದಿನಗಳನ್ನು ಪೂರೈಸಿದಂತಾಗಿದೆ.

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ಬರೋಬ್ಬರಿ 100 ದಿನ ತುಂಬಿದ್ದೇನೋ ಹೌದು, ಆದರೆ, ಶತದಿನವೆಂದರೆ, ನಟರ ಪಾಲಿಗದು ಖುಷಿಯ ವಿಷಯ. ಸಿನಿಮಾ ಚಿತ್ರೀಕರಣ, ಸಾಂಗ್‌ ರಿಲೀಸ್‌, ಟ್ರೇಲರ್‌ ರಿಲೀಸ್‌, ಶೂಟಿಂಗ್‌ ವಿಸಿಟ್‌… ಹೀಗೆ ಅರಾಮಾಗಿ ಇರಬೇಕಿದ್ದ ದರ್ಶನ್‌, ಕಳೆದ ನೂರು ದಿನಗಳಿಂದಲೂ ಅವರು ಜೈಲಲ್ಲಿ ಕೂರುವಂತಾಗಿದೆ. ಒಬ್ಬರೇ ನಾಲ್ಕು ಗೋಡೆ ಮಧ್ಯೆ ಪರಿತಪಿಸುವಂತಾಗಿದೆ. ಒಂದಷ್ಟು ಪಾಪ ಪ್ರಜ್ಞೆಯೂ ಅವರನ್ನು ಕಾಡಿರೋದು ಸುಳ್ಳಲ್ಲ. ಮನುಷ್ಯ ತಪ್ಪು ಮಾಡೋದು ಸಹಜ. ಆದರೆ, ತಪ್ಪಿನ ಅರಿವಾಗೋದು, ಒಬ್ಬಂಟಿಯಾದಾಗ, ಯಾರೂ ಹತ್ತಿರ ಬಾರದಿದ್ದಾಗ, ದರ್ಶನ್‌ ಕೂಡ ಅಂಥದ್ದೇ ಸಮಸ್ಯೆಗೆ ಸಿಲುಕಿದ್ದು ಸುಳ್ಳಲ್ಲ. ಸದ್ಯ ಜೈಲಲ್ಲಿ ಅವರು ಟಿವಿ, ಕುರ್ಚಿ, ಮನೆಯೂಟ ಸೇರಿ ಅನೇಕ ಬೇಡಿಕೆ ಇಟ್ಟಿದ್ದರು. ಆ ಪೈಕಿ ಕೆಲವು ಈಡೇರಿದರೆ ಇನ್ನೂ ಕೆಲವು ಈಡೇರಬೇಕಿದೆ. ದರ್ಶನ್ ಅವರ ಪರ ಇನ್ನೂ ಜಾಮೀನು ಅರ್ಜಿ ಸಲ್ಲಿಕೆಯಾಗಿಲ್ಲ. ಹೀಗಾಗಿ ಅವರು ಮತ್ತಷ್ಟು ದಿನ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಶತದಿನಗಳಂತೆ ಇನ್ನೆಷ್ಟು ದಿನಗಳನ್ನು ಪೂರೈಸಬೇಕೋ ಗೊತ್ತಿಲ್ಲ.

ಹಾಗಾದರೆ, ದರ್ಶನ್‌ ಅವರು ಜೈಲಿಗೆ ಹೋಗುವಂತೆ ಮಾಡಿದ ಘಟನೆಯನ್ನೊಮ್ಮೆ ನೆನಪಿಸುವುದಾದರೆ… ಜೂನ್ 8ರಂದು ರೇಣುಕಾಸ್ವಾಮಿ ಕೊಲೆಯಾಗಿತ್ತು. ಜೂನ್​ 11ರಂದು ಮೈಸೂರಿನ ಹೋಟೆಲ್​ನಲ್ಲಿ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೆಚ್ಚು ಕಮ್ಮಿ ಕೊಲೆ ನಡೆದ ಕೇವಲ 60 ಗಂಟೆಯೊಳಗೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅದೇ ದಿನ ದರ್ಶನ್ ಅವರನ್ನು ಬೆಂಗಳೂರಿಗೆ ಪೊಲೀಸರು ಕರೆತಂದಿದ್ದರು. ನಂತರ ಹೆಚ್ಚಿನ ವಿಚಾರಣೆಗೆ ಅವರನ್ನು ಪೊಲೀಸ್​ ಕಸ್ಟಡಿಗೆ ನೀಡಲಾಯಿತು. ಆ ಬಳಿಕ ಕೇಸ್​ನಲ್ಲಿ ಭಾಗಿಯಾದ ಇತರ 16 ಆರೋಪಿಗಳನ್ನು ಸಹ ಬಂಧಿಸಲಾಯಿತು. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. 12 ದಿನ ಕೊಲೆ ಕೇಸ್ ಸಂಬಂಧ ಪೊಲೀಸರು ದರ್ಶನ್​ ವಿಚಾರಣೆ ಎದುರಿಸಿದ್ದರು. ಈ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾದರು.

ವಿಚಾರಣೆ ಬಳಿಕ ಕೋರ್ಟ್ ದರ್ಶನ್​ಗೆ ನ್ಯಾಯಾಂಗ ಬಂಧನ ವಿಧಿಸಿತು. ಹೀಗಾಗಿ, ದರ್ಶನ್ ಅವರು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆದರು. ಅಲ್ಲಿ ಸುಮಾರು ಎರಡು ತಿಂಗಳು ಇದ್ದರು. ಆಗ ಅವರು ಅಲ್ಲಿನ ಕೆಲ ಅಪರಾಧಿಗಳ ಜೊತೆ ಕುರ್ಚಿಯಲ್ಲಿ ಕುಳಿತು, ಸಿಗರೇಟ್‌ ಹಿಡಿದು ಟೀ ಕುಡಿಯುವ ಫೋಟೋವೊಂದು ವೈರಲ್‌ ಆಗಿತ್ತು. ಆಗ ಸಾಕಷ್ಟು ಸುದ್ದಿಯಾದ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಸದ್ಯ ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಅವರ ನ್ಯಾಯಾಂಗ ಬಂಧನದ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಆಗಿದೆ. ಜೈಲಿನಲ್ಲಿ ಇರಲಾಗದೆ ಒದ್ದಾಡುತ್ತಿದ್ದಾರೆ. ಅದೇನೆ ಇರಲಿ, ಶತದಿನ ಕಂಡ ದರ್ಶನ್‌ಗೆ ಹಾಗೊಮ್ಮೆ ಅವರ ಶತದಿನಗಳ ಸಿನಿಮಾ ಸಂಭ್ರಮ ನೆನಪಾಗಿರುವುದಂತೂ ಸುಳ್ಳಲ್ಲ.

- Advertisement -

Latest Posts

Don't Miss