Movie News: ತಪ್ಪು ಯಾರು ಮಾಡಿದರೇನು? ಅದು ಸಾಬೀತಾದರೆ ಅನುಭವಿಸಲೇಬೇಕು. ಸದ್ಯ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಂದಹಾಗೆ, ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖೆ ತಂಡವನ್ನು ರಚಿಸಿರುವ ಸರ್ಕಾರ ಈ ಆದೇಶ ಹೊರಡಿಸಿರುವುದು ವಿಶೇಷ.
ಕಳೆದ ಶುಕ್ರವಾರ ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು. ಜಾತಿನಿಂದನೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿತ್ತು. ಒಂದು ಪ್ರಕರಣದಲ್ಲಿ ಜಾಮೀನು ಪಡೆದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆ, ಶಾಸಕ ಮುನಿರತ್ನ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಕಗ್ಗಲಿಪುರ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿದ್ದರು. ಮಾಗಡಿ ಡಿವೈಎಸ್ಪಿ ಪ್ರವೀಣ್ ಹಾಗೂ ರಾಮನಗರ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ ಏಳು ಜೀಪುಗಳು, ಒಂದು ಮೀಸಲು ಪಡೆಯ ವಾಹನ ಭದ್ರತೆಯಲ್ಲಿ ಶಾಸಕ ಮುನಿರತ್ನ ಅವರನ್ನ ಬಂಧಿಸಲಾಗಿತ್ತು.
ಇಷ್ಟಕ್ಕೂ ಏನಿದು ಪ್ರಕರಣ ಅಂತ ನೋಡುವುದಾದರೆ, ಶಾಸಕ ಮುನಿರತ್ನ ಸೇರಿದಂತೆ ಒಟ್ಟು 7 ಆರೋಪಿಗಳ ವಿರುದ್ಧ ಬುಧವಾರ ಸಂಜೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಕಗ್ಗಲೀಪುರದ ಖಾಸಗಿ ರೆಸಾರ್ಟ್ ನಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿ 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಮಹಿಳೆ ನೀಡಿದ ದೂರು ಅನ್ವಯಿಸಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ದೂರಿನಲ್ಲಿ ಮುನಿರತ್ನ ನಾಯ್ಡು (ಎ1), ವಿಜಯ್ ಕುಮಾರ್ (ಎ2), ಸುಧಾಕರ (ಎ3), ಕಿರಣ್ ಕುಮಾರ್ (ಎ4), ಲೋಹಿತ್ ಗೌಡ (ಎ5), ಮಂಜುನಾಥ (ಎ6), ಲೋಕಿ (ಎ7) ಎಂದು ಉಲ್ಲೇಖಿಸಲಾಗಿತ್ತು. ಸದ್ಯ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಎಸ್‌ಐಟಿ ರಚನೆ ಮಾಡಿ ಆ ಮೂಲಕ ತನಿಖೆ ಚುರುಕುಗೊಳಿಸಿದೆ.