ಮಧ್ಯಪ್ರದೇಶದಲ್ಲಿ ಘನಘೋರ ಕೃತ್ಯ – ತಾಯಿ ಎದುರೇ 5 ವರ್ಷದ ಮಗುವಿನ ಶಿರಚ್ಛೇದ!

ಮಧ್ಯಪ್ರದೇಶದಲ್ಲಿ ಘನಘೋರ ಭೀಕರ ಘಟನೆ ನಡೆದಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ತಾಯಿ ಕಣ್ಣೆದುರೇ 5 ವರ್ಷದ ಪುಟ್ಟ ಬಾಲಕನನ್ನು ಕ್ರೂರಿಯಾಗಿ ಶಿರಚ್ಛೇದ ಮಾಡಲಾಗಿದೆ. ಆ ಬಾಲಕನನ್ನ 5 ವರ್ಷದ ವಿಕಾಸ್ ಎಂದು ಗುರುತಿಸಲಾಗಿದೆ. ಆರೋಪಿಯನ್ನ 25 ವರ್ಷದ ಮಹೇಶ್ ಎಂದು ಗುರುತಿಸಲಾಗಿದೆ. ಮಹೇಶ್ ಬೈಕ್‌ನಲ್ಲಿ ಕಾಲುಸಿಂಗ್ ಎಂಬುವವರ ಮನೆಗೆ ಬಂದು ಏಕಾಏಕಿ ಒಳನುಗ್ಗಿದ್ದಾನೆ.

ಆಶ್ಚರ್ಯಕರವೆಂದರೆ, ಮನೆಯವರು ಆತನನ್ನು ಎಂದಿಗೂ ನೋಡಿರಲಿಲ್ಲ, ಪರಿಚಯವೇ ಇರಲಿಲ್ಲ. ಮನೆಯೊಳಗೆ ನುಗ್ಗಿದ ಮಹೇಶ್ ಅಲ್ಲಿ ಬಿದ್ದಿದ್ದ ಹರಿತವಾದ ಗುದ್ದಲಿಯನ್ನು ಎತ್ತಿಕೊಂಡು ಪುಟ್ಟ ವಿಕಾಸ್ ಮೇಲೆ ದಾಳಿ ನಡೆಸಿದ್ದಾನೆ. ಕ್ಷಣಾರ್ಧದಲ್ಲೇ ಬಾಲಕನ ಶಿರಚ್ಛೇದ ಮಾಡಿರುವ ಆತ, ಬಳಿಕ ಭುಜಕ್ಕೂ ಗುದ್ದಲಿಯಿಂದ ಹೊಡೆದು ಬಾಲಕನ ದೇಹವನ್ನು ಛಿದ್ರಗೊಳಿಸಿದ್ದಾನೆ.

ಮಗನನ್ನು ರಕ್ಷಿಸಲು ಧಾವಿಸಿದ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ದೃಶ್ಯವನ್ನು ಕಂಡ ಸ್ಥಳೀಯರು ಕೋಪಗೊಂಡು ಆರೋಪಿಯನ್ನು ಹಿಡಿದು ತೀವ್ರವಾಗಿ ಥಳಿಸಿದ್ದಾರೆ. ತೀವ್ರ ಗಾಯಗೊಂಡ ಮಹೇಶ್ ನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸುತ್ತಿದ್ದರೂ ಕೂಡ ಮಾರ್ಗ ಮಧ್ಯೆಯೇ ಆತ ಮೃತಪಟ್ಟಿದ್ದಾನೆ.

ವರದಿ : ಲಾವಣ್ಯ ಅನಿಗೋಳ

About The Author