ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ಭಾರತೀಯ ಸೇನೆಯು 100ಕ್ಕೂ ಅಧಿಕ ಉಗ್ರರ ರುಂಡ ಚೆಂಡಾಡಿತ್ತು. ಈ ಮಹತ್ವಾಕಾಂಕ್ಷಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೆಮ್ಮೆಯ ಸೇನಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ಮಧ್ಯಪ್ರದೇಶದ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೋಫಿಯಾ ಭಯೋತ್ಪಾದಕರ ಸಹೋದರಿ..
ಇನ್ನೂ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ರೈಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅರಣ್ಯ, ಬುಡಕಟ್ಟು ಸಚಿವ ವಿಜಯ್ ಶಾ, ಭಯೋತ್ಪಾದಕರು ನಮ್ಮ ಸಹೋದರಿ, ಹೆಣ್ಣು ಮಕ್ಕಳ ಸಿಂಧೂರವನ್ನು ಅಳಿಸಿ ಹಾಕಿದ್ದರು. ಈ ಮೂಲಕ ಅವರು ಸಿಂಧೂರದ ಗೌರವವನ್ನು ಕಳೆದಿದ್ದರು. ಆದರೆ ನಾವು ಅವರಿಗೆ ತಕ್ಕ ಉತ್ತರ ನೀಡಲು ಅವರ ಸ್ವಂತ ಸಹೋದರಿಯನ್ನು ಕಳುಹಿಸಿದ್ದೇವೆ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಭಯೋತ್ಪಾದಕರ ಹುಟ್ಟಡಗಿಸಿದ ಕರ್ನಲ್ ಸೋಫಿಯಾ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಕರೆದಿರುವ ಬಿಜೆಪಿ ನಾಯಕನ ವಿರುದ್ದ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಸಶಸ್ತ್ರ ಪಡೆಗಳಿಗೆ ಅವಮಾನಿಸಲಾಗಿದೆ..
ಅಲ್ಲದೆ ಇದೇ ವಿಚಾರಕ್ಕೆ ಸಂಬಂಧಿಸಿದ್ದಂತೆ ವಿಜಯ್ ಶಾ ಮಾತನಾಡಿರುವ ವಿಡಿಯೋ ಹಂಚಿಕೊಂಡು ಕಾಂಗ್ರೆಸ್, ಕರ್ನಲ್ ಸೋಫಿಯಾ ಖುರೇಷಿ ಭಯೋತ್ಪಾದಕರ ಸಹೋದರಿ – ಈ ಅವಮಾನಕರ ಹೇಳಿಕೆಯನ್ನು ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಸಚಿವ ವಿಜಯ್ ಶಾ ನೀಡಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಭಾರತದ ಮಗಳು ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಹೆಮ್ಮೆಪಡುತ್ತಾನೆ, ಆದರೆ ಅವರ ಬಗ್ಗೆಇಂತಹ ನಾಚಿಕೆಗೇಡಿನ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೆ ಅವರಿಗೆ ಭಯೋತ್ಪಾದಕರ ಸಹೋದರಿ ಎಂದು ಹಣೆಪಟ್ಟಿ ಕಟ್ಟಲಾಗಿದೆ. ಇದು ನಮ್ಮ ವೀರ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ಸಚಿವ ವಿಜಯ್ ಶಾ ವಿರುದ್ಧ ಸಿಡಿದೆದ್ದಿದೆ.
ಮೋದಿ, ಬಿಜೆಪಿ ನಾಯಕರು ನೀಚ ಮನಸ್ಥಿತಿಗೆ ಕ್ಷಮೆಯಾಚಿಸುತ್ತಾರೆಯೇ..?
ಈ ವಿವಾದಾತ್ಮಕ ಹೇಳಿಕೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್, ನರೇಂದ್ರ ಮೋದಿಯವರನ್ನು ತಮ್ಮ ಮಾರ್ಗದರ್ಶಕ, ಆಪ್ತ ಮಿತ್ರ ಎಂದು ಹೇಳಿಕೊಳ್ಳುವ ವಿಜಯ್ ಶಾ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತದೆಯೇ? ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಈ ನೀಚ ಮನಸ್ಥಿತಿಗೆ ಕ್ಷಮೆಯಾಚಿಸುತ್ತಾರೆಯೇ? ಅಥವಾ, ಯಾವಾಗಲೂ ಹಾಗೆ, ವಿಜಯ್ ಶಾ ಅವರ ಈ ಶೋಚನೀಯ ಮನಸ್ಥಿತಿಗೆ ಪ್ರತಿಫಲವಾಗಿ, ಅವರ ಬೆಂಬಲಕ್ಕಾಗಿ ರ್ಯಾಲಿಗಳನ್ನು ನಡೆಸಲಾಗುತ್ತದೆಯೇ? ಎಂದು ಜರಿದಿದೆ.
ಆಪರೇಷನ್ ಸಿಂಧೂರ್ ಮಾಹಿತಿ ಜಗತ್ತಿಗೆ ನೀಡಿದ್ದ ಖುರೇಷಿ..
ಇನ್ನೂ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ವಿರುದ್ಧ ಭಾರತ ನಡೆಸಿದ ಬಲವಾದ ಪ್ರತೀಕಾರಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸುವಾಗ ಶಾ ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದಿದ್ದರೂ, ಅವರ ಹೇಳಿಕೆಗಳಲ್ಲಿ ಕರ್ನಲ್ ಸೋಫಿಯಾ ಖುರೇಷಿಯವರ ಪರೋಕ್ಷ ಉಲ್ಲೇಖವೆಂದು ವ್ಯಾಪಕವಾಗಿ ಅರ್ಥೈಸಲಾಗುತ್ತಿದೆ. ಈ ಕರ್ನಲ್ ಸೋಫಿಯಾ ಅವರು ಆಪರೇಷನ್ ಸಿಂಧೂರ್ ಬಳಿಕ ರಕ್ಷಣಾ ಇಲಾಖೆ ಹಾಗೂ ಸೇನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ದಾಳಿಯ ಬಗ್ಗೆ ಇಡೀ ಜಗತ್ತಿಗೆ ಮಾಹಿತಿ ನೀಡುವ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಹೀಗಾಗಿ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಜೋರಾಗಿವೆ. ಈ ಸಂದರ್ಭದಲ್ಲಿ ಬಿಜೆಪಿ ನಾಯಕನ ಹೇಳಿಕೆಯು ಜನಸಾಮಾನ್ಯರ ಹಾಗೂ ಅದರಲ್ಲೂ ಮಹಿಳೆಯರ ಪಿತ್ತ ನೆತ್ತಿಗೇರುವಂತೆ ಮಾಡಿದೆ.