Political News: ಕೆಲ ತಿಂಗಳಿಂದ ಆರ್‌ಎಸ್‌ಎಸ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಬಿಜೆಪಿ ನಾಯಕರು, ಪ್ರಿಯಾಂಕ್ ಖರ್ಗೆಗೆ ಅಭಿವೃದ್ಧಿ ಮಾಡಿ ಪ್ರಸಿದ್ಧರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರ್‌ಎಸ್‌ಎಸ್‌ನ್ನು ವಿರೋಧ ಮಾಡಿ, ಹೇಳಿಕೆ ನೀಡಿ ಪ್ರಸಿದ್ಧಿ ಪಡೆಯಲು ಪ್ರಯತ್ನಿಸುತ್ತಿದ್ದಾರೆಂದು ವ್ಯಂಗ್ಯವಾಡಿದ್ದರು.
ಇದೀಗ ಮತ್ತೆ ಪ್ರಿಯಾಂಕ್ ಆರ್‌ಎಸ್‌ಎಸ್ ವಿರುದ್ಧ ಮತ್ತು ಅದಕ್ಕೆ ಬೆಂಬಲಿಸುತ್ತಿರುವ ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎನ್ನುವವರ ಪರ ನಿಲ್ಲುವುದಕ್ಕಿಂತ.. ಸಂವಿಧಾನ ಬದ್ಧವಾಗಿ ಸ್ಥಾಪನೆಯಾದ ಕಾನೂನಿನ ರಕ್ಷಣೆ ಒದಗಿಸುವ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚುವವರ ಪರ ನಿಲ್ಲುವುದಕ್ಕಿಂತ.. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಪ್ರಕಾರ ಮೀಸಲಾತಿಯಿಂದ ಗೆದ್ದ ಶಾಸಕನ ಮನೆಗೆ ಬೆಂಕಿ ಹಚ್ಚುವವರ ಪರ ನಿಲ್ಲುವುದಕ್ಕಿಂತ.. ನಮ್ಮ ಹೆಮ್ಮೆಯ ರಾಷ್ಟ್ರ ಧ್ವಜದಲ್ಲಿರುವ ಮೂರು ಬಣ್ಣಗಳಲ್ಲಿ ಒಂದಾಗಿರುವ “ಕೇಸರಿ” ಪರ ನಿಂತರೆ ತಪ್ಪೇನು? ಎಂದು ಜೆಡಿಎಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್, ಸಂಘವೆಂದರೆ “ಸದಾನಂದ“ದ ಪರಿವಾರ, ಅಧಿಕಾರದ ಹಪಹಪಿತನ, ಪರೋಕ್ಷ ಆಡಳಿತದ ಕುತಂತ್ರ. ಇದಕ್ಕಾಗಿ ಆರ್ಎಸ್ಎಸ್ ”ಹಿಂದುತ್ವ“ ಎಂಬ ಟೂಲ್ ಕಿಟ್ ಬಳಸುತ್ತಿದೆ. ಆರ್ಎಸ್ಎಸ್ ಎಲ್ಲಿ ನೋಂದಣಿಯಾಗಿದೆ? ಅದರ ಅಧಿಕೃತತೆಗೆ ಪುರಾವೆ ಏನಿದೆ? ಅದರ ಆಸ್ತಿ, ವಹಿವಾಟುಗಳ ಲೆಕ್ಕವೆಲ್ಲಿದೆ? ಆದಾಯದ ಮೂಲವೇನು? ಸಂಘ ಕಾರ್ಯನಿರ್ವಹಿಸುವ ಕಟ್ಟಡಗಳು ಸ್ವಂತದ್ದೇ? ಬೇನಾಮಿಯೇ? ಸಂಘವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಯ್ಕೆಯಾದ ಕೇಂದ್ರ ಮಂತ್ರಿಗಳ ಅಧಿಕಾರವನ್ನು ಬದಿಗೊತ್ತಿ ಅಧಿಕಾರಿಗಳ ಮೂಲಕ ಆಡಳಿತ ನಡೆಸುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಈ ನೆಲದ ಕಾನೂನನ್ನು ಗೌರವಿಸದ, ಸಂವಿಧಾನವನ್ನು, ರಾಷ್ಟ್ರಧ್ವಜವನ್ನು ಒಪ್ಪದ ಸಂಘವು ಈ ದೇಶಕ್ಕೆ ವಿಷ ಉಣಿಸುತ್ತಿರುವ ಕಾರ್ಕೊಟಕ ವಿಷ ಸರ್ಪ. ತಮ್ಮ ನಾಯಕರ, ಆರ್ಎಸ್ಎಸ್ ಬಗೆಗಿನ ಕಟು ಮಾತುಗಳು ನನ್ನವು ಕೂಡ. ಆರ್ಎಸ್ಎಸ್ ನ ಕ್ಷುದ್ರ ಗುಣಗಳ ಬಗ್ಗೆ, ವಿಕೃತ ನಡವಳಿಕೆಗಳ ಬಗ್ಗೆ ಕುಮಾರಣ್ಣನವರು ಬರೆದ ಈ ಸೊಗಸಾದ ಬರಹವನ್ನು ಜೆಡಿಎಸ್ ಟ್ವೀಟಾಧಿಪತಿಗಳು ಮತ್ತೊಮ್ಮೆ ಓದಬೇಕು.
ಅಂದಹಾಗೆ, ಜೆಡಿಎಸ್ ನವರಿಗೆ ತಿಳಿದಿರಲಿ, ತ್ರಿವರ್ಣ ಸೇರಿದರೆ ಮಾತ್ರ ರಾಷ್ಟ್ರಧ್ವಜವಾಗುತ್ತದೆ, ಜಾತ್ಯತೀತತೆ ಅಂದರೆ ಈ ಮೂರೂ ಬಣ್ಣಗಳು. ಕೇಸರಿ ಒಂದೇ ಬಣ್ಣದ ಪರ ನಿಂತರೆ ಜಾತ್ಯತೀತತೆ ಆಗಲಾರದು. ಆರ್ಎಸ್ಎಸ್ ನಮ್ಮ ತ್ರಿವರ್ಣ ಧ್ವಜವನ್ನು ವಿರೋಧಿಸಿ ದೇಶದ್ರೋಹಿ ನಡೆ ಅನುಸರಿಸಿತ್ತು ಎನ್ನುವುದು ಚಡ್ಡಿ ಹಾಕಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ ತಿಳಿದಿರಲಿ ಎಂದಿರುವ ಪ್ರಿಯಾಂಕ್ ಬರಹದ ಲಿಂಕ್ ಕೂಡ ಹಾಕಿದ್ದಾರೆ.
ಸಂಘವೆಂದರೆ “ಸದಾನಂದ“ದ ಪರಿವಾರ, ಅಧಿಕಾರದ ಹಪಹಪಿತನ, ಪರೋಕ್ಷ ಆಡಳಿತದ ಕುತಂತ್ರ.
ಇದಕ್ಕಾಗಿ ಆರ್ಎಸ್ಎಸ್ ”ಹಿಂದುತ್ವ“ ಎಂಬ ಟೂಲ್ ಕಿಟ್ ಬಳಸುತ್ತಿದೆ.ಆರ್ಎಸ್ಎಸ್ ಎಲ್ಲಿ ನೋಂದಣಿಯಾಗಿದೆ?
ಅದರ ಅಧಿಕೃತತೆಗೆ ಪುರಾವೆ ಏನಿದೆ?
ಅದರ ಆಸ್ತಿ, ವಹಿವಾಟುಗಳ ಲೆಕ್ಕವೆಲ್ಲಿದೆ?
ಆದಾಯದ ಮೂಲವೇನು?
ಸಂಘ ಕಾರ್ಯನಿರ್ವಹಿಸುವ ಕಟ್ಟಡಗಳು ಸ್ವಂತದ್ದೇ?… https://t.co/XBe82zppMg— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 7, 2025

