ಧರ್ಮಸ್ಥಳ ಪ್ರಕರಣ ಕ್ಲೈಮ್ಯಾಕ್ಸ್‌ಗೆ ಬಂದಿತ್ತು ಅನ್ನುವಷ್ಟರಲ್ಲಿ ಯಾರೂ ಊಹಿಸಿರದ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಬಂಗ್ಲೆಗುಡ್ಡದಲ್ಲಿ ಸೆಪ್ಟೆಂಬರ್ 17ರಂದು ನಡೆದ ಶೋಧ ಕಾರ್ಯದಲ್ಲಿ, ಬರೋಬ್ಬರಿ 5 ತಲೆಬುರುಡೆ, 100 ಮೂಳೆಗಳು ಪತ್ತೆಯಾಗಿವೆ. ಸೌಜನ್ಯ ಮಾವ ವಿಠಲ ಗೌಡ ಹೇಳಿಕೆ ಆಧರಿಸಿ, ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ರು. ಇಡೀ ದಿನ ಪ್ರತ್ಯೇಕ 3 ತಂಡಗಳಾಗಿ, ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ ಭೂಮಿಯ ಮೇಲ್ಭಾಗದಲ್ಲೇ ತಲೆಬುರುಡೆ, ಮೂಳೆಗಳು ಸಿಕ್ಕಿವೆ.
ನಿನ್ನೆ ಬಂಗ್ಲೆಗುಡ್ಡದಲ್ಲಿ ಸಿಕ್ಕ ಮೂಳೆಗಳನ್ನು ಸೋಕೋ ತಂಡ ಸಂಗ್ರಹಿಸಿದೆ. ಜೊತೆಗೆ ಅಂಗಿ, ಪ್ಯಾಂಟ್, ಸೀರೆ, ಊರುಗೋಲು ಹಾಗೂ ಲೈಸೆನ್ಸ್ ಪತ್ತೆಯಾಗಿವೆ. ತನಿಖಾಧಿಕಾರಿ ಎಸ್ಪಿ ಜಿತೇಂದ್ರ ದಯಾಮ ನೇತೃತ್ವದಲ್ಲಿ, ಸೋಕೋ ತಂಡ, ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಮೆಟಲ್ ಡಿಟೆಕ್ಟರ್ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಅರಣ್ಯ ಇಲಾಖೆ ಅನುಮತಿ ಪಡೆದ ಎಸ್‌ಐಟಿ ತಂಡ, ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರವೇಶದಿಂದಲೇ ಶೋಧ ಆರಂಭಿಸಿತ್ತು. ಮತ್ತು ಇಂದೂ ಕೂಡ ಬಂಗ್ಲೆಗುಡ್ಡದಲ್ಲಿ ಶೋಧ ನಡೆಸುವ ಸಾಧ್ಯತೆ ಇದೆ. ಸುಮಾರು 15 ಎಕರೆ ವಿಸ್ತೀರ್ಣದಲ್ಲಿರುವ ಬಂಗ್ಲೆಗುಡ್ಡ ಅರಣ್ಯವನ್ನು ಪೂರ್ತಿ ಶೋಧನೆ ಸಾಧ್ಯತೆ ಇದೆ.
ಮತ್ತೊಂದೆಡೆ, ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ತಿಮರೋಡಿ ಮನೆಯಲ್ಲಿ ಎಸ್‌ಐಟಿ ಅಧಿಕಾರಿಗಳಿಂದ ತಲಾಶ್ ವೇಳೆ, ಅಕ್ರಮ ಶಸ್ತ್ರಾಸ್ತ್ರ ಪತ್ತೆಯಾಗಿದ್ದವು. ಈ ಕುರಿತು ಸೆಪ್ಟಂಬರ್ 16ರಂದು ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್, ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಈ ಹಿನ್ನೆಲೆ ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.