ಬಿಹಾರ ಮಾದರಿಯಲ್ಲೇ ಕರ್ನಾಟಕದಲ್ಲೂ ಮತದಾರರ ಪಟ್ಟಿಗಳ ಪರಿಷ್ಕರಣೆ ಮಾಡಲಾಗುತ್ತೆ. ಬಿಹಾರದಲ್ಲಿ ಚುನಾವಣೆಗೂ ಮುನ್ನ 52 ಲಕ್ಷ ಮತದಾರರನ್ನ ಗುರುತಿಸಿ ರದ್ದು ಮಾಡಲಾಗಿದೆ. ಈ ಮತದಾರರ ಪಟ್ಟಿಗೆ RJD, ಕಾಂಗ್ರೆಸ್ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳು ಹೋರಾಟವನ್ನ ಮುಂದುವರಿಸಿದ್ದಾರೆ.
ಕರ್ನಾಟಕದಲ್ಲೂ ಬಿಹಾರದ ಮಾದರಿ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ, ರಾಜ್ಯ ಚುನಾವಣಾ ಆಯೋಗ ಸಜ್ಜಾಗಿದೆ. ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ರಾಜ್ಯದಲ್ಲೂ ಪ್ರಕ್ರಿಯೆ ಆರಂಭವಾಗಲಿದೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಪೌರತ್ವ ಕಾಯಿದೆ ಪ್ರಕಾರ, ರಾಜ್ಯದ ಎಲ್ಲಾ ಅರ್ಹ ನಾಗರಿಕರ ಹೆಸರನ್ನು ಮತದಾರ ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಅನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಮತ್ತು ಅನರ್ಹರನ್ನು ಪಟ್ಟಿಯಿಂದ ತೆಗೆದು ಹಾಕುವುದು ಎಸ್‌ಐಆರ್‌ನ ಮುಖ್ಯ ಉದ್ದೇಶ.
ರಾಜ್ಯದಲ್ಲಿ2002ರಲ್ಲಿ ಮತಪಟ್ಟಿ ಪರಿಷ್ಕರಣೆ ನಡೆದಿತ್ತು. ಆಗ ರಾಜ್ಯದಲ್ಲಿ 3.40 ಕೋಟಿ ಮತದಾರರು ಇದ್ದರು. ಪ್ರಸ್ತುತ ರಾಜ್ಯದಲ್ಲಿ 5.40 ಕೋಟಿಗೂ ಅಧಿಕ ಮತದಾರರು ಇದ್ದಾರೆ. ಈ ಬಾರಿ ನಡೆಸಲು ಉದ್ದೇಶಿರುವ ಎಸ್ಐಆರ್‌ನಲ್ಲಿ 2002ರ ಮತದಾರರ ಪಟ್ಟಿ ಹಾಗೂ ಈಗಿನ ಮತದಾರರ ಪಟ್ಟಿ ನಡುವಿನ ವ್ಯತ್ಯಾಸ ಪರಿಶೀಲಿಸುತ್ತೇವೆ. ಮತದಾರರ ಹೆಸರು, ವಿಳಾಸ ಇತ್ಯಾದಿ ಅಂಶಗಳನ್ನು ತಾಳೆ ಮಾಡುತ್ತೇವೆ. ಈ ಎಸ್‌ಐಆರ್ ಪ್ರಕ್ರಿಯೆಗೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ಬೇಕಾಗಬಹುದು.
ಇದೀಗ 23 ವರ್ಷಗಳ ಬಳಿಕ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. 2002ರ ಎಸ್‌ಐಆರ್‌ಗೆ ಸಂಬಂಧಿಸಿದ ಪಟ್ಟಿಯನ್ನು, ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಎರಡೂವರೆಯಿಂದ ಮೂರು ತಿಂಗಳೊಳಗೆ ಪ್ರಕ್ರಿಯೆ ಮುಕ್ತಾಯಗೊಂಡ ನಂತರ, ಹೊಸ ಮತದಾರ ಪಟ್ಟಿಯನ್ನು ಪ್ರಕಟಿಸಲಾಗುವುದು. ಅದರಲ್ಲಿ ಮತದಾರರು ಪಟ್ಟಿಯಲ್ಲಿದ್ದಾರಾ ಅಥವಾ ಇಲ್ವಾ ಎಂಬುದನ್ನು ಖಚಿತಪಡಿಸಲಾಗುವುದು. ಪ್ರಕ್ರಿಯೆ ಆರಂಭವಾದ ನಂತರ ಬೂತ್ ಮಟ್ಟದ ಅಧಿಕಾರಿಗಳು, ಪ್ರತಿಯೊಂದು ಮನೆಗೂ ತೆರಳಿ, ಪರಿಷ್ಕರಣೆ ಮಾಡಲಿದ್ದಾರೆ.
ರಾಜ್ಯದಲ್ಲಿಒಟ್ಟು 58 ಸಾವಿರ ಮತಗಟ್ಟೆಗಳಿವೆ. ಎಸ್‌ಐಆರ್‌ಗೆ 25 ಸಾವಿರ ಬಿಎಲ್‌ಒಗಳಿದ್ದು, ಪ್ರಕ್ರಿಯೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ. ಚುನಾವಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ, ಬೂತ್ ಮಟ್ಟದ ಅಧಿಕಾರಿಗಳ ಗೌರವ ಧನವನ್ನು 6 ಸಾವಿರ ರೂ.ನಿಂದ 12 ಸಾವಿರಕ್ಕೆ ಹೆಚ್ಚಿಸಲಾಗಿದೆ. ಬೂತ್ ಮಟ್ಟದಲ್ಲಿ ಪರಿಷ್ಕರಣೆಗೆ ಪ್ರತಿ ಬಿಎಲ್‌ಒಗಳಿಗೆ 30 ದಿನಗಳ ಕಾಲಾವಕಾಶವಿರಲಿದೆ. ಇನ್ನು, ಪ್ರತಿಯೊಂದು ಮಾಹಿತಿಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ಸಂಗ್ರಹಿಸಲಾಗುವುದು. ಇದರಿಂದ ಭವಿಷ್ಯದಲ್ಲಿಎಸ್‌ಐಆರ್ ಕೈಗೊಂಡಾಗ, ದಾಖಲೆ ನೀಡುವ ಪ್ರಮೇಯ ಉದ್ಭವಿಸುವುದಿಲ್ಲ. ಹೀಗಂತ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.




