ಚಿನ್ನದ ದರ ಇಳಿಯಲೆಂದು ಹರಕೆ, ಮುನಿದ ಚಿನ್ನ ಒಲಿಯಲಿ

ವಿಜಯನಗರ ಜಿಲ್ಲೆಯಲ್ಲಿ ಚಿನ್ನದ ಬೆಲೆ ದಿನವೂ ಎತ್ತಕ್ಕೇರುತ್ತಿರುವ ಹಿನ್ನೆಲೆಯಲ್ಲಿ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಮ್ನಳ್ಳಿ ಗ್ರಾಮದ ಪ್ರಸಿದ್ಧ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರೆಯಲ್ಲಿ ಭಕ್ತನೊಬ್ಬ ವಿಭಿನ್ನ ಹರಕೆಯನ್ನು ಸಲ್ಲಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಭಕ್ತ ಕೆ. ನಾಗರಾಜ ಉಲವತ್ತಿ ಅವರು ಚಿನ್ನದ ದರ ಇಳಿಕೆಯಾಗುವಂತೆ ದೇವಿಯ ಮುಂದೆ ಅಪರೂಪದ ಬೇಡಿಕೆಯನ್ನು ಸಲ್ಲಿಸಿದ್ದಾರೆ. “ಚಿನ್ನದ ದರ ಕಡಿಮೆಯಾಗಲಿ, ಬಡವರು ಹಾಗೂ ಸಾಮಾನ್ಯ ಜನರೂ ಚಿನ್ನ ಖರೀದಿಸಲು ಸಾಧ್ಯವಾಗಲಿ” ಎಂಬ ಆಶಯದಿಂದ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಈ ವೇಳೆ ಅವರು ಬಾಳೆ ಹಣ್ಣಿನ ಮೇಲೆ “ಚಿನ್ನದ ದರ ಇಳಿಯಲಿ, ಮುನಿದ ಚಿನ್ನ ಒಲಿಯಲಿ” ಎಂದು ಬರೆಯುವ ಮೂಲಕ, ತಾಯಿಯ ರಥೋತ್ಸವದಲ್ಲಿ ಭಕ್ತಿಪೂರ್ವಕವಾಗಿ ಅರ್ಪಣೆ ಸಲ್ಲಿಸಿದ್ದರು.

ಚಿಮ್ನಳ್ಳಿ ದುರ್ಗಮ್ಮ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಿರುವಾಗ, ನಾಗರಾಜ ಉಲವತ್ತಿಯ ಈ ವಿಭಿನ್ನ ಹರಕೆ ಎಲ್ಲರ ಗಮನ ಸೆಳೆದಿದ್ದು, ದೇವಿಯ ಕೃಪೆಯಿಂದ ಚಿನ್ನದ ಬೆಲೆ ಇಳಿಯಲಿ ಎಂಬ ಆಶಯವನ್ನು ಜನರು ಹೃತ್ಪೂರ್ವಕವಾಗಿ ವ್ಯಕ್ತಪಡಿಸಿದ್ದಾರೆ.

ಚಿನ್ನದ ಬೆಲೆ ಏರಿಕೆಯ ಹಿನ್ನೆಲೆ ದೇಶದ ಸಾಮಾನ್ಯ ಜನರಲ್ಲಿ ಆತಂಕ ಮತ್ತು ಕುತೂಹಲ ಹೆಚ್ಚಾಗಿರುವ ಸಂದರ್ಭದಲ್ಲಿ, ಈ ರೀತಿಯ ಭಕ್ತಿಪೂರ್ಣ ಅರ್ಪಣೆ ವಿಶೇಷ ಚರ್ಚೆಗೆ ಕಾರಣವಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author