ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿರುವ ಎಚ್‌ಪಿವಿ ವಿರುದ್ಧ ಹೋರಾಡಲು ಲಸಿಕೆ ಕಂಡುಹಿಡಿಯಲಾಗಿದೆ. ಇದನ್ನು ಮುಂಚಿತವಾಗಿಯೇ ನೀಡಿದ್ರೆ ಭವಿಷ್ಯದಲ್ಲಿಈ ಕಾಯಿಲೆ ಬಾರದಂತೆ ತಡೆಗಟ್ಟಬಹುದಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯು ಮೈಸೂರು ಜಿಲ್ಲೆಯ 9ರಿಂದ 14 ವರ್ಷದ, ಸುಮಾರು 27 ಸಾವಿರ ಹೆಣ್ಣು ಮಕ್ಕಳಿಗೆ ಚುಚ್ಚುಮದ್ದು ನೀಡಲು ಸಿದ್ಧತೆ ಮಾಡಿಕೊಂಡಿದೆ. ಮೈಸೂರಿನಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ, ಒಟ್ಟು 27 ಸಾವಿರ ವಿದ್ಯಾರ್ಥಿನಿಯರಿಗೆ ಗರ್ಭಕಂಠ ಕ್ಯಾನ್ಸರ್ ಬರುವುದನ್ನು ತಡೆಗಟ್ಟುವ ಎಚ್‌ಪಿವಿ ಲಸಿಕೆ ನೀಡಲು ಉದ್ದೇಶಿಸಲಾಗಿದೆ.
ಈ ಲಸಿಕೆಯು ಎಚ್‌ಪಿವಿ ವೈರಸ್‌ನಿಂದ ಮಾನವರಲ್ಲಿಉಂಟಾಗುವ ಕೆಲವು ಗಂಭೀರ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಇದು ಯೋನಿ, ಶಿಶ್ನ, ಗುದ ಮತ್ತು ಗಂಟಲು ಕ್ಯಾನ್ಸರ್‌ಗಳನ್ನು ತಡೆಗಟ್ಟಲಿದೆ. ಹಾಗಾಗಿ 9ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಈ ಲಸಿಕೆ ನೀಡಲಾಗುತ್ತಿದೆ. 6ರಿಂದ 12 ತಿಂಗಳ ಅಂತರದಲ್ಲಿ2 ಡೋಸ್‌ಗಳನ್ನು ಹಾಗೂ 15 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ 3 ಡೋಸ್‌ಗಳನ್ನು ನೀಡಬೇಕಾಗಿದೆ.
ಸರ್ವಿಕಲ್ ಕ್ಯಾನ್ಸರ್ ವಿಶ್ವಾದ್ಯಂತ ಮಹಿಳೆಯರಿಗೆ ಉಂಟಾಗುವ, 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್. ಇದು 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಪ್ರತಿ ದಿನ 200 ಮಹಿಳೆಯರು ಸಾಯುತ್ತಾರೆ. ಭಾರತದಲ್ಲಿ ವಾರ್ಷಿಕವಾಗಿ ಸುಮಾರು 1.24 ಲಕ್ಷ ಹೊಸ ಸರ್ವಿಕಲ್ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಭಾರತದಲ್ಲಿ15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 51 ಕೋಟಿಗೂ ಹೆಚ್ಚು ಮಹಿಳೆಯರು ಸರ್ವಿಕಲ್ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯದಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರೆಲ್ಲರಿಗೂ ಲಸಿಕೆಯಿಂದ ಮರುಜೀವ ದೊರೆಯಲಿದೆ.




