ತಿರಂಗಾ ಯಾತ್ರೆಗೆ ಪೊಲೀಸರ ಬ್ರೇಕ್ – ಅಭಿಜಿತ್ ದೀಪ್ಕೆ ಅರೆಸ್ಟ್?

ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಅಂದರೆ ಸಿಜೆಪಿ ಕರೆ ನೀಡಿರುವ ರಾಷ್ಟ್ರಧ್ವಜದ ‘ತಿರಂಗಾ ಯಾತ್ರೆ’ ಆರಂಭಗೊಂಡಿದೆ. ಆಮ್ ಆದ್ಮಿ ಪಕ್ಷದ ಬೆಂಬಲದೊಂದಿಗೆ ಕನ್ನಾಟ್ ಪ್ಲೇಸ್‌ನಲ್ಲಿ ಲಕ್ಷಾಂತರ ಜನರ ಕಿಕ್ಕಿರಿದ ಜನಸಂದಣಿಯ ನಡುವೆ ಈ ಯಾತ್ರೆ ಮುಂದುವರಿದಿದ್ದು, ದೆಹಲಿ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ತಿರಂಗಾ ಯಾತ್ರೆಗೆ ತೆರಳಲು ಸಜ್ಜಾಗಿದ್ದ ಸಿಜೆಪಿ ಮುಖ್ಯಸ್ಥ ಅಭಿಜಿತ್ ದೀಪ್ಕೆಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿರಂಗ ಯಾತ್ರೆ ಆರಂಭವಾಗುವುದಕ್ಕೂ ಮುನ್ನ ಸೆಖ್ಂತ್ರಲ್ ಪಾರ್ಕ್ ಬಳಿಯೇ ಅಭಿಜಿತ್ ದೀಪ್ಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಜೆಪಿಯ ತಿರಂಗ ಯಾತ್ರೆಗೆ ಸ್ಥಳೀಯ ಆಡಳಿತ ಅನುಮತಿ ನೀಡಿಲ್ಲ. ಆದಾಗ್ಯೂ ರ್ಯಾಲಿ ನಡೆಸಲು ಮುಂದಾಗಿದ್ದಕ್ಜೆ ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಯಾತ್ರೆಗೂ ಮುನ್ನ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ನಿವಾಸಕ್ಕೆ ತೆರಳಿದ್ದ ಪೊಲೀಸರು, ರ‍್ಯಾಲಿ ನಡೆಸದಂತೆ ಎಚ್ಚರಿಸಿ ನೋಟಿಸ್ ಜಾರಿ ಮಾಡಿದ್ದರು. ‘ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರನ್ನು ಪ್ರಚೋದಿಸುತ್ತಿದ್ದೀರಿ’ ಎಂಬ ಅಂಶವಿರುವ ನೋಟಿಸ್ ನೋಡಿ ಆಕ್ರೋಶಗೊಂಡ ದೀಪ್ಕೆ, ‘ನೇರವಾಗಿ ನನ್ನನ್ನು ಗಲ್ಲಿಗೇರಿಸಿ ಬಿಡಿ, ಇದ್ಯಾವ ರೀತಿಯ ತಮಾಷೆ?’ ಎಂದು ಪೊಲೀಸರನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ತಾನು ಪ್ರಚೋದನೆ ನೀಡಿರುವುದಕ್ಕೆ ಕನಿಷ್ಠ ಒಂದು ಸಾಕ್ಷಿಯನ್ನಾದರೂ ತೋರಿಸುವಂತೆ ಅವರು ಸವಾಲು ಹಾಕಿದ್ದಾರೆ.

ಮತದಾರರ ಪಟ್ಟಿ ಅಕ್ರಮ ಖಂಡಿಸಿ ಹಾಗೂ ಜೈಲಿನಲ್ಲಿರುವ ಸಿಜೆಪಿ ನಾಯಕರ ಬಿಡುಗಡೆಗೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿರುವ ಈ ಯಾತ್ರೆಯ ಹಿನ್ನೆಲೆಯಲ್ಲಿ, ಕನ್ನಾಟ್ ಪ್ಲೇಸ್ ಸಂಪೂರ್ಣವಾಗಿ ಕೋಟೆಯಾಗಿ ಪರಿವರ್ತನೆಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 6,000ಕ್ಕೂ ಹೆಚ್ಚು ಪೊಲೀಸರು ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇವಲ 11 ಜನರ ಆಯ್ಕೆಯಾದ ಗುಂಪಿಗೆ ಮಾತ್ರ ರಾಷ್ಟ್ರಗೀತೆ ಹಾಡಲು ಪೊಲೀಸರು ಷರತ್ತುಬದ್ಧ ಅವಕಾಶ ನೀಡಿದ್ದಾರೆ.

ನಿಷೇಧಾಜ್ಞೆ ಹಾಗೂ ಪೊಲೀಸರ ತಡೆಯ ನಡುವೆಯೂ ಸಿಜೆಪಿ ಕಾರ್ಯಕರ್ತರು ತಿರಂಗಾ ಯಾತ್ರೆಯನ್ನು ಮುಂದುವರಿಸಿದ್ದು, ದೆಹಲಿಯಲ್ಲಿ ಹೈಡ್ರಾಮಾ ಮುಂದುವರಿದಿದೆ. ಈ ಪ್ರತಿಭಟನೆ ಯಾವ ಹಂತ ತಲುಪಲಿದೆ ಎಂಬುದನ್ನು ಕಾದುನೋಡಬೇಕು.

About The Author