ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಪ್ರತಿ ಟನ್ ಕಬ್ಬಿಗೆ 1,000 ರೂಪಾಯಿ ಪ್ರೋತ್ಸಾಹಧನ ಘೋಷಿಸುವಂತೆ ಪಟ್ಟು ಹಿಡಿದಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಬೆಳಗಾವಿಯ ಹತ್ತರಗಿ ಟೋಲ್ನಿಂದ ಆರಂಭವಾಗಿರುವ ಕಬ್ಬು ಬೆಳೆಗಾರರ ಬೃಹತ್ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.
ನಿನ್ನೆ ರಾತ್ರಿ ಬೆಳಗಾವಿಯ ಸುವರ್ಣ ವಿಧಾನಸೌಧದ ಪಕ್ಕದಲ್ಲಿ ವಾಸ್ತವ್ಯ ಹೂಡಿದ್ದ ನೂರಾರು ರೈತರು, ಇಂದು ಬೆಳಿಗ್ಗೆಯಿಂದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ. ಪ್ರತಿ ದಿನ ಸರಾಸರಿ 25 ಕಿಲೋಮೀಟರ್ ಸಾಗುತ್ತಿರುವ ಈ ನಡಿಗೆ ಇಂದು ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ತಲುಪಲಿದೆ. ಸಕ್ಕರೆ ಎಂಎಸ್ಪಿಯನ್ನು ಪ್ರತಿ ಕೆಜಿಗೆ 60 ರೂ.ಗೆ ಹೆಚ್ಚಿಸಬೇಕು ಹಾಗೂ ತಮಿಳುನಾಡು ಮಾದರಿಯಲ್ಲಿ 1,000 ರೂ. ಪ್ರೋತ್ಸಾಹಧನ ನೀಡಬೇಕು ಎಂಬುದು ರೈತರ ಮುಖ್ಯ ಬೇಡಿಕೆಯಾಗಿದೆ.
ಕೇಂದ್ರ ಸಚಿವರ ಮನವಿಗೂ ಜಗ್ಗದ ರೈತರು, ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ಮಿತ್ರರ ಜೊತೆ ಮಾತನಾಡಿದ ಚೂನಪ್ಪ ಪೂಜಾರಿ, ನಮ್ಮ ಪಾದಯಾತ್ರೆ ಹುಬ್ಬಳ್ಳಿ ತಲುಪುವಷ್ಟರಲ್ಲಿ ಕೇಂದ್ರ ಎಂಎಸ್ಪಿ ಹೆಚ್ಚಿಸಬೇಕು ಹಾಗೂ ರಾಜ್ಯ ಸರ್ಕಾರ ಪ್ರೋತ್ಸಾಹಧನ ಘೋಷಿಸಬೇಕು. ಇಲ್ಲವಾದಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಜನಾಂದೋಲನ ನಡೆಸಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದ್ದಾರೆ. ಅನ್ನದಾತರ ಈ ಉಗ್ರ ಹೋರಾಟಕ್ಕೆ ಸರ್ಕಾರಗಳು ಯಾವ ರೀತಿಯ ಸ್ಪಂದನೆ ನೀಡಲಿವೆ ಎಂಬುದನ್ನು ಕಾದುನೋಡಬೇಕು.




