RSS ಬಗ್ಗೆ ಬಿಜೆಪಿ ಶಾಸಕ ಸುರೇಶ್ ಗೌಡ ಆರೋಪದ ಬಗ್ಗೆ, ಕಾಂಗ್ರೆಸ್ಸಿಗ ಬಿ.ಕೆ. ಹರಿಪ್ರಸಾದ್ ವಿಡಿಯೋವೊಂದನ್ನ ರಿಲೀಸ್ ಮಾಡಿದ್ದಾರೆ. ಅಡ್ವಾಣಿಯವರನ್ನು ಮೂಲೆಗೆ ತಳ್ಳಿದ ಇದೇ RSS ಯಡಿಯೂರಪ್ಪ ಅವರನ್ನೂ ನೆಮ್ಮದಿಯಾಗಿರಲು ಬಿಟ್ಟಿರಲಿಲ್ಲ. ಕೊನೆಗೂ ಎಳೆದು ಮೂಲೆಗೆ ಕೂರಿಸುವಲ್ಲಿ ಯಶಸ್ವಿಯಾಗಿತ್ತು. RSSನವರು ಕಡು ಭ್ರಷ್ಟರು ಎಂಬ ಸತ್ಯವನ್ನು, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಶಾಸಕ ಸುರೇಶ್ ಗೌಡರೇ ಹೇಳಿದ್ದಾರೆ. ಇದಕ್ಕೆ ಉತ್ತರ ಹೇಳುವ ಧೈರ್ಯ ಕರ್ನಾಟಕ ಬಿಜೆಪಿ ನಾಯಕರಾದ ಬಿ.ವೈ ವಿಜಯೇಂದ್ರ, ಆರ್. ಅಶೋಕ್ ಅವರಿಗೆ ಇದೆಯಾ ಎಂದು ಪ್ರಶ್ನಿಸಿ, ಟ್ವೀಟ್ ಮಾಡಿದ್ದಾರೆ.
ಸುರೇಶ್ ಗೌಡರ ಈ ಹೇಳಿಕೆ ಹೊರಬಂದ ನಂತರವೂ ಯಾವುದೇ ಕ್ರಮ ಜರುಗಿಸದೆ, ಅವರಿಗೆ ಟಿಕೆಟ್ ನೀಡಿದೆ ಅಂದರೆ ಏನರ್ಥ? ಅವರಿಂದ RSS ಬಗೆಗಿನ ಇನ್ನಷ್ಟು ನಿಗೂಢ ಸತ್ಯಗಳು ಹೊರಬರದಿರಲಿ ಎಂಬ ಉದ್ದೇಶದಿಂದ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಬಿಜೆಪಿಯ ಭ್ರಷ್ಟಾಚಾರದ ಹಣ ಸಂಘದ ಸೇವೆಗೆ ಸಲ್ಲಿಕೆಯಾಗಿರುವ ಇನ್ನೆಷ್ಟು ಪ್ರಕರಣಗಳಿವೆ ಎಂಬ ಸತ್ಯವನ್ನು ಬಯಲಿಗಿಡಬೇಕಿದೆ. ಬಿಜೆಪಿ ಹಾಗೂ ಸಂಘದ ನಡುವಿನ ಅಕ್ರಮ ಹಾಗೂ ಅನೈತಿಕ ವ್ಯವಹಾರಗಳನ್ನು ಹೊರಗೆಳೆಯಬೇಕಿದೆ ಎಂದು ಬಿ.ಕೆ. ಹರಿಪ್ರಸಾದ್ ಪೋಸ್ಟ್ ಮಾಡಿದ್ದಾರೆ.
RSS ಈ ದೇಶಕ್ಕೆ, ಸಮಾಜಕ್ಕೆ, ಸಂವಿಧಾನಕ್ಕೆ ಮಾತ್ರ ಮಾರಕವಲ್ಲ ಸ್ವತಃ ಬಿಜೆಪಿ ನಾಯಕರಿಗೂ ಮಾರಕವಾಗಿದೆ!
ಈ ಸತ್ಯವನ್ನು ಹೇಳಿದ್ದು ಬಿಜೆಪಿಯವರೇ ಹೊರತು ನಾವಲ್ಲ.RSSನ ಸರ್ವಾಧಿಕಾರಿತನಕ್ಕೆ ಬಿಜೆಪಿಯ ಬಲಿಷ್ಠ ನಾಯಕರೂ ಬಲಿಯಾಗಿ ಬಿಲ ಸೇರಿದ್ದಾರೆ.
RSS ಎಂಬ ವಿಷಜಂತು ಬಿಜೆಪಿಯವರನ್ನೂ ಸುಟ್ಟು ಬೂದಿ ಮಾಡಿದೆ.ಈಗ ಬಿಜೆಪಿಯವರು ಸ್ಪರ್ಧೆಗೆ… pic.twitter.com/Q7CJg0olIy
— Hariprasad.B.K. (@HariprasadBK2) October 21, 2025
ಬಿ.ಕೆ. ಹರಿಪ್ರಸಾದ್ ವಿಡಿಯೋ ರಿಲೀಸ್ ಬಗ್ಗೆ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು, ವಿಡಿಯೋನೇ ಸುಳ್ಳು ಎಂದು ಹೇಳಿದ್ದಾರೆ. ಹರಿಪ್ರಸಾದ್ ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಹೀಗಾಗಿ ಇಂಥಾ ಯೋಚನೆಗಳು ಬರ್ತಿವೆ. 2008, 2013ರಲ್ಲೂ ನಾನು ಶಾಸಕನಾಗ್ತೇನೆ. 2018ರ ಚುನಾವಣೆ ಬಂದಾಗ ಆರ್‌ಎಸ್‌ಎಸ್, ಬಿಎಸ್‌ವೈರನ್ನು ಬೈಯ್ಯವಂತೆ ಮಾಡಿ, ಟಿಕೆಟ್ ತಪ್ಪಿಸಲು ಸಂಚು ಮಾಡಿದ್ರು. ಡುಪ್ಲಿಕೇಟ್ ವಿಡಿಯೋ ಮಾಡಿ ರಿಲೀಸ್ ಮಾಡ್ತಾರೆ.
ಆಗ ಪಿಯೂಷ್ ಗೋಯಲ್ ನನ್ನನ್ನ ಕರೆಸಿಕೊಂಡು ಕೇಳಿದ್ರು. 2021ರಲ್ಲಿ ಬೆಂಗಳೂರು ಜಿಲ್ಲಾ ಕೋರ್ಟ್‌ಗೆ ಹೋಗ್ತೇನೆ. ಈ ವಿಡಿಯೋಗೆ ಸ್ಟೇ ಬಂದಿದೆ. ಈ ವಿಡಿಯೋನೇ ಸುಳ್ಳು. ಹರಿಪ್ರಸಾದ್‌ಗೆ ಮಂತ್ರಿಯಾಗುವ ಆಸೆ ಇದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯರನ್ನು ಓಲೈಸಬೇಕಿದೆ. ಆದ್ರೆ ನನ್ನನ್ಯಾಕೆ ಮಧ್ಯೆ ಎಳೆದುಕೊಂಡು ಬಂದಿದ್ದಾರೋ ಗೊತ್ತಿಲ್ಲ. ನಾನು ಶಾಸಕ ಅಷ್ಟೇ. ನಿಮ್ಗೆ ಇಂಥಾ ಚಿಲ್ಲರೆ ರಾಜಕಾರಣದ ಅಗತ್ಯತೆ ಏನಿದೆ ಎಂದು ಸುರೇಶ್ ಗೌಡ ಪ್ರಶ್ನಿಸಿದ್ದಾರೆ.