ರಾಜಧಾನಿಯ ಬೆಸ್ಕಾಂ ಹಾಗೂ ಜಲಮಂಡಳಿ ಕಚೇರಿಗಳ ಅಧಿಕಾರಿಗಳ ಬಳಿ ಲಕ್ಷಾಂತರ ರೂ.ನಗದು, ಒಂದು ದಿನದ ಮುಂಚೆಯೇ ಹಾಜರಾತಿ ಪುಸ್ತಕಕ್ಕೆ ಸಹಿ, ಖಾಸಗಿ ಏಜೆಂಟರ ಬಳಿ ಸರಕಾರದ ಕಡತಗಳ ನಿರ್ವಹಣೆ ಹಾಗೂ ಎಇಇ ಗೂಗಲ್ ಮುಖಾಂತರ 12 ಲಕ್ಷ ರೂ.ವರ್ಗಾವಣೆ ಸೇರಿದಂತೆ ಹಲವು ಅಕ್ರಮಗಳು ಗುರುವಾರ ಬಟಾಬಯಲಾಗಿವೆ.
ಲೋಕಾಯುಕ್ತ ನ್ಯಾಯಾಂಗ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಜಲಮಂಡಳಿ ಹಾಗೂ ಬೆಸ್ಕಾಂನ 45 ಕಚೇರಿಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಕ್ರಮಗಳ ಸರಮಾಲೆಯೇ ತೆರೆದುಕೊಂಡಿದೆ. ಅಧಿಕಾರಿಗಳ ಕರ್ತವ್ಯಲೋಪ, ಜೇಬಿನಲ್ಲಿ ಇಟ್ಟುಕೊಂಡಿದ್ದ ಕಂತೆ ಕಂತೆ ಹಣ, ಖಾಸಗಿ ವ್ಯಕ್ತಿಗಳ ದರ್ಬಾರ್ ಕಂಡು ಲೋಕಾ ಅಧಿಕಾರಿಗಳೇ ದಂಗಾಗಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇತೃತ್ವದ ತಂಡ ಯಲಹಂಕ ಸ್ಯಾಟಲೈಟ್‌ನ ಬೆಸ್ಕಾಂ ಕಚೇರಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದು, ಈ ವ್ಯಾಪ್ತಿಯಲ್ಲಿ ಬರೋಬ್ಬರಿ 1.18 ಕೋಟಿ ರೂ. ಬಿಲ್ ಪಾವತಿ ಕಟ್ಟಿಸಿಕೊಳ್ಳದೇ ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳ ನಿರ್ಲಕ್ಷ್ಯ ಬಯಲಿಗೆ ಬಂದಿದೆ. ಜತೆಗೆ, ಕಚೇರಿಯ ನೌಕರರು ನಗದು ವಹಿವಾಟು ಘೋಷಿಸಿರಲಿಲ್ಲ. ಹಾಜರಾತಿಯನ್ನೂ ಸರಿಯಾಗಿ ಪಾಲಿಸದೆ ಅರ್ಧಕ್ಕೂ ಹೆಚ್ಚು ಬೆಸ್ಕಾಂ ನೌಕರರು ಗೈರಾಗಿರುವುದು ಕಂಡು ಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.