ಬೆಂಗಳೂರು: ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ಧಾಂತ್ ಅವರನ್ನು ಬೆಂಗಳೂರಿನ ಹೋಟೆಲ್ ನಲ್ಲಿ ಪಾರ್ಟಿಯೊಂದರಲ್ಲಿ ಡ್ರಗ್ಸ್ ತೆಗೆದುಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಪೊಲೀಸರು ಪಾರ್ಕ್ ಹೋಟೆಲ್ನಲ್ಲಿ ಪಾರ್ಟಿಯ ಮೇಲೆ ದಾಳಿ ನಡೆಸಿ ಸುಮಾರು 35 ಅತಿಥಿಗಳ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಐದು ಅತಿಥಿಗಳು ಡ್ರಗ್ಸ್ ಸೇವಿಸಿರೋದು, ದೃಢಪಟ್ಟಿದೆ. ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ, ಸಿದ್ಧಾಂತ್ ಕಪೂರ್ ಅವರಲ್ಲಿ ಒಬ್ಬರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ಧಾಂತ್ ಕಪೂರ್ ಅವರನ್ನು ಪಾರ್ಟಿಯಲ್ಲಿ ಡಿಜೆಯಾಗಿ ಆಹ್ವಾನಿಸಲಾಯಿತು. ಇನ್ನೂ ಐದು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಡ್ರಗ್ಸ್ ಸೇವಿಸಿದ್ದಕ್ಕಾಗಿ ಪಾಸಿಟಿವ್ ಬಂದ ನಂತರ ಸಿದ್ಧಾಂತ್ ಕಪೂರ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ. ಅವರೆಲ್ಲರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟನ್ಸಸ್ (ಎನ್ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಎಸ್ ಗುಳೇದ್ ತಿಳಿಸಿದ್ದಾರೆ.
ಈ ಐವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಗುಳೇದ್ ಹೇಳಿದರು.



