Sandalwood: ಚಿನ್ನದ ಸರ ಧರಿಸುವಾಗ ಹುಷಾರಾಗಿರಿ ಎಂದು ಎಚ್ಚರಿಕೆ ಸಂದೇಶ ನೀಡಿದ ನಟಿ ಯಮುನಾ ಶ್ರೀನಿಧಿ

Sandalwood: ನಟಿ ಯಮುನಾ ಶ್ರೀನಿಧಿಯವರು ಚಿನ್ನದ ಸರ ಧರಿಸುವಾಗ ಹುಷಾರಾಗಿರಿ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಕೆಲ ದಿನಗಳ ಹಿಂದೆ ಓರ್ವ ಮಹಿಳೆಯ ಚಿನ್ನದ ಸರವನ್ನು ಕಳ್ಳರು ಎಗರಿಸಿದ್ದು, ಆಕೆ ಆ ಘಟನೆಯಿಂದ ಹೆದರಿ, ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆಯೇ ಯಮುನಾ ಅವರು ಮಾತನಾಡಿದ್ದಾರೆ.

ಚಿನ್ನದ ಬೆಲೆ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ಸಣ್ಣ ತುಂಡು ಚಿನ್ನ ಧರಿಸಿ ಆಚೆ ಹೋಗುವುದಕ್ಕೂ ಕೂಡಾ ತುಂಬಾ ಆಲೋಚಿಸಬೇಕಾಗಿದೆ. ಅಂಥದ್ರಲ್ಲಿ, ನಾವು ಚಿನ್ನದ ಸರ, ಕರಿಮಣಿ ಸರ, ಧರಿಸಿ, ಆಚೆ ಹೋಗುವಾಗ, ಎಚ್ಚರಿಕೆಯಿಂದ ಇರಲೇಬೇಕು ಅಂತಾರೆ ಯಮುನಾ.

ಅಲ್ಲದೇ, ನಾವು ಬರೀ ಚಿನ್ನವಲ್ಲದೇ, ಚಿನ್ನದ ಬಣ್ಣದ ಆಭರಣಗಳನ್ನು ಕೂಡಾ ಧರಿಸುವುದನ್ನು ನಿಲ್ಲಿಸಬೇಕು. ಏಕೆಂದರೆ ಕಳ್ಳನಿಗೆ ತನ್ನ ಗುರಿಯ ಬಗ್ಗೆ ಮಾತ್ರ ಗಮನವಿರುತ್ತದೆ. ಹಾಗಾಗಿ ಆತ ಆ ಆಭರಣ ಚಿನ್ನದ್ದೋ, ಚಿನ್ನದ ಥರ ಕಾಣುವ ನಕಲಿ ಆಭರಣವೋ ಅಂತಾ ಗಮನಿಸುವುದಿಲ್ಲ. ಆ ರೀತಿ ಕಳ್ಳತನ ಮಾಡುವ ಭರದಲ್ಲಿ, ಜೀವಕ್ಕೆ ಕುತ್ತು ತಂದು ಬಿಡುತ್ತಾರೆ. ಹಾಗಾಗಿ ಚಿನ್ನ ಅಥವಾ ಚಿನ್ನದ ಬಣ್ಣದ ಆಭರಣ ಧರಿಸುವುದೂ ಇಂದಿನ ಕಾಲದಲ್ಲಿ ಆತಂಕಕಾರಿ ಸಂಗತಿ ಅಂತಾರೆ ಯಮುನಾ.

ಅಲ್ಲದೇ, ಮದುವೆ ಸಮಾರಂಭಗಳಿಗೆ ಹೋಗುವಾಗ ನಿಮ್ಮಲ್ಲಿರುವ ಆಭರಣಗಳನ್ನು ಧರಿಸಿ ಹೋಗುತ್ತೀರಿ. ಆದರೆ ಅಲ್ಲಿಯೂ ನಿಮ್ಮನ್ನು ಫಾಲೋ ಮಾಡುವವರು ಇರುವ ಸಾಧ್ಯತೆ ಇರುತ್ತದೆ. ನೀವು ಖುಷಿಯಲ್ಲಿ ಮೈಮರೆಯುವುದನ್ನೇ ಕಾಯುವವರು ಇರುವ ಸಾಧ್ಯತೆ ಇರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಳ್ಳತನಗಳು, ಕೆಲವು ಬಾರಿ ಮನೆಗೆ ಬರುವ ಅಪರಿಚಿತರಿಂದಲೇ ನಡೆಯಬಹುದು. ಹಾಗಾಗಿ ನಮಗೆ ಆಡಂಬರಕ್ಕಿಂತ ಮುಖ್ಯ ಸುರಕ್ಷತೆ.

ಪೋಲೀಸರು ತಮ್ಮ ಕರ್ತವ್ಯ ತಾವು ಮಾಡುತ್ತಿರುತ್ತಾರೆ. ಆದರೆ ಅವರು ಎಲ್ಲಕಡೆ ಇರಲು ಸಾಧ್ಯವಿಲ್ಲ. ಹಾಗಾಗಿ ನಾವು ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಕೈಲಾದಂಥ ಕೆಲಸವನ್ನು ನಾವು ಮಾಡೋಣ. ಮಾರುಕಟ್ಟೆಯಲ್ಲಿ ಸಾಕಷ್ಟು ಕೃತಕವಾದಂಥ ಬಹಳ ಸುಂದರವಾದಂಥ ಕಪ್ಪು ಲೋಹದ ಆಭರಣಗಳು ಸಿಗುತ್ತದೆ. ಅಂಥ ಆಭರಣ ಧರಿಸಿ, ನಿಮ್ಮ ಸುರಕ್ಷತೆ ಬಗ್ಗೆ ಗಮನ ನೀಡಿ ಎಂದು ಯಮುನಾ ಕರೆ ನೀಡಿದ್ದಾರೆ.

ಇತ್ತೀಚೆಗೆ ಚಿನ್ನದ ಬೆಲೆ ಹೆಚ್ಚಾದ ಕಾರಣ, ಸರಗಳ್ಳತನ ಮತ್ತು ಚಿನ್ನ ಕಳ್ಳತನದ ಘಟನೆಗಳು ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ನಮ್ಮ ಮತ್ತು ನಮ್ಮ ಕುಟುಂಬದ ಸುರಕ್ಷತೆಗೆ ಎಲ್ಲರೂ ಎಚ್ಚರಿಕೆಯಿಂದ ಇರೋಣ.
ಜಾಗೃತಿಯೇ ಸುರಕ್ಷತೆ. ಸ್ವಲ್ಪ ಎಚ್ಚರಿಕೆ ದೊಡ್ಡ ನಷ್ಟವನ್ನು ತಪ್ಪಿಸಬಹುದು. ಎಲ್ಲರೂ ಸೇರಿ ನಮ್ಮ ಸಮುದಾಯವನ್ನು ಸುರಕ್ಷಿತವಾಗಿಡೋಣ ಎಂದು ಯಮುನಾ ಶ್ರೀನಿಧಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.

About The Author