ಬಿಹಾರದಲ್ಲಿ ಎಲೆಕ್ಷನ್ ಹತ್ತಿರವಾಗುತ್ತಿದೆ. ಚುನಾವಣಾ ಕಾರ್ಯತಂತ್ರದ ಕುರಿತು, ಕಾಂಗ್ರೆಸ್ ನಾಯಕರು ಮಹತ್ವದ ಕಾರ್ಯಕಾರಿ ಸಭೆ ನಡೆಸುತ್ತಿದ್ದಾರೆ. ಮತಗಳ್ಳತನ ವಿರುದ್ಧ ಹೋರಾಟದ ಬಳಿಕ ಮೊದಲ ಸಭೆ ಇದಾಗಿದೆ. ಬಿಹಾರದಲ್ಲಿ ನಡೆಯುತ್ತಿರುವ ಮೊದಲ ಸಿಡಬ್ಲ್ಯುಸಿ ಸಭೆ, ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದುವಾಗಿದೆ.
ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಮತ ಅಧಿಕಾರ ಯಾತ್ರೆ ಬೆನ್ನಲ್ಲೇ ಸದಾಖತ್ ಆಶ್ರಮದಲ್ಲಿ ಈ ಸಭೆ ನಡೀತಿದೆ. ಮಹಾಘಟಬಂಧನ್ ಮೈತ್ರಿಕೂಟದ ಸೀಟು ಹಂಚಿಕೆ ಮಾತುಕತೆ ಹಿನ್ನೆಲೆಯಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೀತಿದೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಿಡಬ್ಲ್ಯುಸಿ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಿದ್ದು, 38 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಬಿಹಾರದಲ್ಲಿ 1990ರಲ್ಲಿ ಅಧಿಕಾರ ಕಳೆದುಕೊಂಡ ಬಳಿಕ, ಪ್ರಸಕ್ತ ವಾತಾವರಣವಷ್ಟೇ ಕಾಂಗ್ರೆಸ್ಸಿಗೆ ಆಶಾದಾಯಕವಾಗಿದೆ. ಇದಕ್ಕೆ ರಾಹುಲ್ ಗಾಂಧಿ ನೇತೃತ್ವದ ಮತದಾರ ಅಧಿಕಾರ ಯಾತ್ರೆಯೇ, ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ 2020ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, 19ರಲ್ಲಷ್ಟೇ ಗೆಲುವು ಸಾಧಿಸಿತ್ತು. ಈ ಬಾರಿ 76 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ.