ಅನೇಕ ದಶಕಗಳ ಬಳಿಕ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅಕ್ಟೋಬರ್ 31ರಂದು ರಾಜಮುಡಿ ಉತ್ಸವ ಮತ್ತು ಅಷ್ಟತೀರ್ಥೋತ್ಸವ ಒಂದೇ ದಿನ ನಡೆಯಲಿದ್ದು, ಭಕ್ತರಿಗೆ ಅಪರೂಪದ ಧಾರ್ಮಿಕ ಕ್ಷಣವಾಗಲಿದೆ.
ಸಾಮಾನ್ಯವಾಗಿ ಅಷ್ಟತೀರ್ಥೋತ್ಸವಕ್ಕೂ ಮೊದಲು ರಾಜಮುಡಿ ಉತ್ಸವ ನಡೆಯುತ್ತಿತ್ತು. ನಂತರ ಆರನೇ ತಿರುನಾಳ ದಿನ ಅಷ್ಟತೀರ್ಥೋತ್ಸವ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ವಿಶೇಷ ನಕ್ಷತ್ರದ ಸಂಯೋಗದಿಂದ ಎರಡೂ ಉತ್ಸವಗಳು ಒಂದೇ ದಿನ ನಡೆಯುತ್ತಿರುವುದು ಪವಿತ್ರ ಘಟನೆಯಾಗಿದೆ.
ಅಕ್ಟೋಬರ್ 31ರಂದು ಬೆಳಿಗ್ಗೆ ಅಷ್ಟತೀರ್ಥೋತ್ಸವ ಮತ್ತು ರಾತ್ರಿ ರಾಜಮುಡಿ ಉತ್ಸವ ನಡೆಯಲಿದೆ. ಈ ವೇಳೆ ಚೆಲುವನಾರಾಯಣಸ್ವಾಮಿ ಮೂರ್ತಿಗೆ ಮೈಸೂರು ಮಹಾರಾಜರಿಂದ ಬಂದ ಸಿಂಹಲಾಂಛನದ ಅಪರೂಪದ ವಜ್ರ ರಾಜಮುಡಿ ಕಿರೀಟ, ಗಂಡಭೇರುಂಡ ಪದಕ, 12 ಆಳ್ವಾರರನ್ನು ಒಳಗೊಂಡ ಪದ್ಮಪೀಠ, ಶಂಖ, ಚಕ್ರ, ಗದೆ ಸೇರಿದಂತೆ ವಜ್ರ, ಪಚ್ಚೆ ಮತ್ತು ಮುತ್ತುಗಳಿಂದ ಮಾಡಿದ 16 ಬಗೆಯ ಆಭರಣಗಳನ್ನು ಅಲಂಕರಿಸಲಾಗುತ್ತದೆ ಎಂದು ದೇವಾಲಯದ ಪಾರುಪತ್ತೇಗಾರರು ತಿಳಿಸಿದ್ದಾರೆ.
ಕಾರ್ತಿಕ ಮಾಸದ ರಾಜಮುಡಿ ಬ್ರಹ್ಮೋತ್ಸವ ಅಕ್ಟೋಬರ್ 26ರಂದು ಅಂಕುರಾರ್ಪಣೆಯೊಂದಿಗೆ ಆರಂಭವಾಗಿ ನವೆಂಬರ್ 5ರವರೆಗೆ ಹತ್ತು ದಿನಗಳ ಕಾಲ ನಡೆಯಲಿದೆ. ಮೈಸೂರು ಅರಸರ ಕುಲದೈವವಾದ ಚೆಲುವನಾರಾಯಣಸ್ವಾಮಿಗೆ ಸುಮಾರು 600 ವರ್ಷಗಳಿಂದ ಈ ರಾಜಮುಡಿ ಬ್ರಹ್ಮೋತ್ಸವ ಆಚರಣೆ ನಡೆಯುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ