ಮೈಸೂರು – ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟವನ್ನು ಮೊದಲ ಬಾರಿಗೆ ಕಾಲ್ನಡಿಗೆಯಲ್ಲಿ ಏರಿ ದೇವರ ದರ್ಶನ ಪಡೆದರು.
ಒಟ್ಟು 3,108 ಮೆಟ್ಟಿಲುಗಳಿರುವ ಈ ಪವಿತ್ರ ಬೆಟ್ಟ, ನೈಸರ್ಗಿಕ ಸೌಂದರ್ಯ ಮತ್ತು ಭಕ್ತಿಭಾವದ ಮಿಶ್ರಣವಾಗಿದ್ದು, ಮುಂಜಾನೆ ಮಂಜುಮೋಡದಿಂದ ಆವರಿತವಾಗಿತ್ತು. ಸಂಸದರು ಬೆಳಗ್ಗಿನ ಜಾವವೇ ಆಗಮಿಸಿ, ಸ್ಥಳೀಯ ಭಕ್ತರೊಂದಿಗೆ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಕಾಲ್ನಡಿಗೆಯಲ್ಲಿ3,108 ಮೆಟ್ಟಿಲುಗಳನ್ನು ಏರಿದರು. ಚುಮುಚುಮು ಚಳಿ ಹಾಗೂ ಮಂಜಿನ ತಂಪು ಗಾಳಿ ನಡುವೆಯೂ ಅವರು ಉತ್ಸಾಹದಿಂದ ಬೆಟ್ಟದ ಶಿಖರ ತಲುಪಿ ದೇವರ ದರ್ಶನ ಪಡೆದರು.
ದರ್ಶನದ ಬಳಿಕ ಮಾತನಾಡಿದ ಅವರು, ದೇವರ ದರ್ಶನದಿಂದ ಮನಸ್ಸಿಗೆ ಅಪಾರ ಶಾಂತಿ ಹಾಗೂ ಧನ್ಯತೆಯ ಭಾವ ಮೂಡಿದೆ. ಇಂದು ವಿಶೇಷ ಪೂಜೆ ಸಲ್ಲಿಸಿ, ನಾಡಿನ ಶಾಂತಿ, ಸಮೃದ್ಧಿ ಹಾಗೂ ಜನರ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದೇನೆ. ಸಿಡಿಲು ಮಲ್ಲಿಕಾರ್ಜುನಸ್ವಾಮಿ ದೇವಾಲಯ ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ವಿಸ್ತರಿಸಲು ಹಾಗೂ ಭಕ್ತರಿಗೆ ಹೆಚ್ಚಿನ ಅನುಕೂಲ ಒದಗಿಸಲು ನಾನು ಬದ್ಧನಿದ್ದೇನೆ ಎಂದು ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

