ಆಕೆಯದ್ದು ನಿಜಕ್ಕೂ ಕರುಳು ಹಿಂಡುವ ಕಥೆ.. ಒಂದರ ಹಿಂದೊಂದರಂತೆ ನೋವು, ಆಘಾತ. ತಿಂಗಳ ಹಿಂದೆ ತನ್ನ ಕುಟುಂಬದ 9 ಮಂದಿಯನ್ನ ಕಳ್ಕೊಂಡ್ರೆ, ಇಂದು ಕಣ್ಣೀರು ಒರೆಸಿದವನನ್ನೂ ಕಳೆದುಕೊಂಡಿದ್ದಾಳೆ.. ಎಂಥ ಕಲ್ಲು ಮನಸ್ಸನ್ನೂ ಕಾಡುವ ಕರುಣಾಜನಕ ಸ್ಟೋರಿಯೊಂದನ್ನ ನಿಮ್ಮ ಮುಂದೆ ಇಡ್ತಿದ್ದೀವಿ..
ಕಳೆದ ಜುಲೈನಲ್ಲಿ ಕೇರಳದ ವಯನಾಡಿನಲ್ಲಿ ಭಾರಿ ಪ್ರವಾಹ ಆಗಿತ್ತು.. ಆಗ ಭೂಕುಸಿತ ಸಂಭವಿಸಿ ನೂರಾರು ಜನ ಜೀವ ಬಿಟ್ಟಿದ್ದರು.. ಅದರಲ್ಲಿ ಶೃತಿ ಕುಟುಂಬ ಕೂಡ ಒಂದು. ವಯನಾಡಿನ ವಿನಾಶಕಾರಿ ಭೂಕುಸಿತದಲ್ಲಿ ಶೃತಿ ತನ್ನ ತಂದೆ ತಾಯಿ, ಸಹೋದರಿಯರು ಸೇರಿದಂತೆ ಕುಟುಂಬದ 9 ಮಂದಿಯನ್ನ ಕಳೆದುಕೊಂಡಿದ್ದಳು. ಬಡಪಾಯಿ ಶೃತಿ ಮಾತ್ರ ಬದುಕುಳಿದಿದ್ದಳು.. ಆದ್ರೆ ಅಂದು ಬಂದು ಆಕೆಯ ಕಣ್ಣೀರು ಒರೆಸಿದ್ದವ ಇಂದು ಮತ್ತೆ ಆಕೆಯನ್ನು ಒಂಟಿಯಾಗಿ ಬಿಟ್ಟು ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಾನೆ.
ವಯನಾಡಿನ ಚೂರಲ್ಮಲಾ ನಿವಾಸಿ ಶೃತಿ… ಜುಲೈ 30ರಂದು ಭೀಕರ ಭೂ ಕುಸಿತದಲ್ಲಿ ತನ್ನ ಕುಟುಂಬ ಕಳೆದುಕೊಂಡಿದ್ದಳು. ಆಗ ಶೃತಿಯ ಕಣ್ಣಿರು ಒರೆಸಿದ್ದು 27 ವರ್ಷದ ಜೆನ್ಸನ್.. ಶೃತಿಯನ್ನು ಪ್ರೀತಿಸ್ತಿದ್ದ ಜೆನ್ಸನ್, ಶೀಘ್ರವೇ ಶೃತಿಯನ್ನು ಮದುವೆಯಾಗಲು ನಿರ್ಧರಿಸಿದ್ದ.. ಭೂ ಕುಸಿತಕ್ಕೆ ಮೊದಲೇ ಅವರಿಬ್ಬರ ವಿವಾಹ ನಿಶ್ಚಿತಾರ್ಥ ನಡೆದಿತ್ತು.. ಮದುವೆ ಸಿದ್ಧತೆಯಲ್ಲಿ ಇರುವಾಗಲೇ ಶೃತಿ ಪೋಷಕರನ್ನು ಕಳೆದುಕೊಂಡಿದ್ದಳು. ಈ ಬಳಿಕವೂ ಇಬ್ಬರೂ ನೋವಿನಲ್ಲೇ ಮದುವೆಗೆ ಸಿದ್ಧತೆ ಕೂಡ ನಡೆದಿತ್ತು.. ಆದ್ರೆ ವಿಧಿಯ ಆಟವೇ ಬೇರೆ ಇತ್ತು.. ಸಂಕಷ್ಟದಲ್ಲಿ ಕೈ ಹಿಡಿದ ಜೆನ್ಸನ್ನನ್ನೂ ಆ ಕ್ರೂರ ವಿಧಿ ಈಗ ಕಿತ್ತುಕೊಂಡಿದೆ
ಮದುವೆ ಸಿದ್ಧತೆಗೆಂತೇ ಜೆನ್ಸನ್ ತನ್ನ ಕುಟುಂಬದ ಜೊತೆ ಶೃತಿಯನ್ನು ಕರೆದುಕೊಂಡು ಕೋಯಿಕ್ಕೋಡ್ಗೆ ವ್ಯಾನ್ನಲ್ಲಿ ಹೋಗುತ್ತಿದ್ರು. ಆದ್ರೆ ವಯನಾಡಿನ ಕಲ್ಪೆಟ್ಟಾ ಅನ್ನೋ ಪ್ರದೇಶದಲ್ಲಿ ಇವರಿದ್ದ ವ್ಯಾನ್, ಬಸ್ಗೆ ಡಿಕ್ಕಿ ಹೊಡೆದಿತ್ತು.. ಈ ಅಪಘಾತದಲ್ಲಿ ಭಾವಿ ವಧು ವರರಾಗಬೇಕಿದ್ದ ಜೆನ್ಸನ್ ಹಾಗೂ ಶೃತಿ ಕೂಡ ಗಂಭೀರ ಗಾಯಗೊಂಡಿದ್ರು. ಜೆನ್ಸನ್ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ, ಶೃತಿ ಕಾಲುಮುರಿದಿದೆ. ಜೆನ್ಸನ್ ಕುಟುಂಬಸ್ಥರು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶೃತಿ ಬಾಳಿನ ವಿಪರ್ಯಾಸ ನೋಡಿ, ಜೆನ್ಸನ್ ಅನ್ಯಧರ್ಮೀಯನಾದನೂ, ಅವರಿಬ್ಬರ ಮದುವೆಗೆ ಎಲ್ಲರೂ ಸಮ್ಮತಿಸಿದ್ರು.. ಆದ್ರೆ ವಿಧಿ ಬಿಡಲಿಲ್ಲ.. ಮೊದಲು ಭೂ ಕುಸಿತದಲ್ಲಿ ಶೃತಿ ಕುಟುಂಬವನ್ನ ಬಲಿ ಪಡೀತು.. ಈಗ ಮದುವೆಯಾಗಬೇಕಿದ್ದ ಜೆನ್ಸನ್ ಜೀವವನ್ನೇ ಬಲಿ ಪಡೆದಿದೆ… ಶೃತಿಗೆ ಈಗ ಮತ್ತೆ ಉಳಿದಿದ್ದು ಅದೇ ಕಣ್ಣೀರು, ಅದೇ ನೋವು..