ನವೆಂಬರ್ ಕ್ರಾಂತಿ, ಸಿಎಂ ಬದಲಾವಣೆ ಚರ್ಚೆಯ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಇದೇ ಹೊತ್ತಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ರಾಜಕೀಯ ಬದುಕಿನ ಕೊನೆಗಾಲದಲ್ಲಿ ಇದ್ದಾರೆಂದು ಹೇಳಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.
ಸಿದ್ದರಾಮಯ್ಯ ಬಳಿಕ ಮುಂದಿನ ಸಿಎಂ ಯಾರೆಂಬ ಪ್ರಶ್ನೆಗೆ ಎಂಎಲ್‌ಸಿ ಯತೀಂದ್ರ, ಅಹಿಂದ ದಾಳ ಉರುಳಿಸಿದ್ದಾರೆ. ಸತೀಶ್ ಜಾರಕಿಹೊಳಿ ಹೆಸರನ್ನು ಪ್ರಸ್ತಾಪಿಸಿದ್ದು, ಅಹಿಂದ ಸಮುದಾಯವನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದಾರೆ. ಡಿಕೆಶಿಗೆ ಕೌಂಟರ್ ಆಗಿ ಹೊಸ ನಾಯಕತ್ವದ ದಾಳ ಉರುಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ, ಶ್ರೀ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದು ಸಿದ್ದರಾಮಯ್ಯ ಕೃಪಾಕಟಾಕ್ಷದೊಂದಿಗೆ ಜಾರಕಿಹೊಳಿ ಕುಟುಂಬಕ್ಕೆ ಸಿಎಂ ಪಟ್ಟ ಒಲಿಯುವ ಮುನ್ಸೂಚನೆ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ಸಿಎಂ ಸ್ಥಾನದ ಬಗ್ಗೆ ಮಾತನಾಡಿದ್ದ ಸತೀಶ್ ಜಾರಕಿಹೊಳಿ, ನಾನು ಆ ಆಸೆ ಬಿಟ್ಟು 1 ವರ್ಷವಾಯ್ತು ಎಂದು ಹೇಳಿದ್ರು. ಆದ್ರೀಗ ಸಿದ್ದರಾಮಯ್ಯ ಪುತ್ರ, ಸತೀಶ್ ಜಾರಕಿಹೊಳಿ ಹೆಸರು ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಜಟಾಪಟಿ ಏರ್ಪಟ್ಟಿರುವ ಹೊತ್ತಲ್ಲಿ, ಯತೀಂದ್ರ ಹೇಳಿಕೆ ತಲ್ಲಣ ಸೃಷ್ಟಿಸಿದೆ.
ಈ ಮಧ್ಯೆ, ಸಿಎಂ ಸ್ಥಾನಕ್ಕಾಗಿ ಜಾತಕಪಕ್ಷಿಯಂತೆ ತಾಳ್ಮೆಯಿಂದಲೇ ಎದುರು ಕಾಯುತ್ತಿರುವ ಡಿಕೆಶಿ, ಮುಂದಿನ ನಡೆ ಏನು ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಒಂದ್ವೇಳೆ ಸಿದ್ದು ಬಳಿಕ ಅಹಿಂದ ನಾಯಕರಿಗೆ ಸಿಎಂ ಪಟ್ಟ ಸಿಕ್ಕಿದ್ರೆ, ಡಿಕೆಶಿ ಏನ್ ಮಾಡ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.